Saturday, June 23, 2012

ಹುಸಿಯಾದವೋ ಎಲ್ಲ ಹುಸಿಯಾದವೋ


ಆರ್ಥಿಕವಾಗಿ ಹೆಚ್ಚಾದ ಕನ್ನಡ ಚಿತ್ರಗಳ ವ್ಯಾಪ್ತಿ, ಲಾಭದ ಮೊತ್ತ, ಹೊಸ ನಟರ ದಂಡು ಇದೆಲ್ಲ ನೋಡಿದರೆ ನಮ್ಮ ಚಿತ್ರರಂಗ ಬೆಳೆಯುತ್ತಿದೆ ಅನ್ನಿಸೋದು ನಿಜ. ಆದರೆ ನಾವು ಹೆಮ್ಮೆ ಪಡುವಂಥ ಅಥವಾ ನಮ್ಮನ್ನು ಬೆಳೆಸುವಂಥ ಕನ್ನಡ ಸಿನೆಮಾಗಳು ಎಷ್ಟು ಬಂದಿವೆ?
ದೊಡ್ಡ ನಟರಾದ ವಿಷ್ಣು ಕೊನೆಯ ಕೆಲ ವರ್ಷಗಳಲ್ಲಿ ಕಲಾಸಾಮ್ರಾಟ್, ಹುಲಿ, ಸಿಂಹ ಮುಂತಾದ ಪ್ರಾಣಿಗಳ ಸಹವಾಸಕ್ಕೆ ಬಿದ್ದು ನಮ್ಮ ಕನ್ನಡ ಸಿನೆಮಾ, ವಿಷ್ಣು ಸರ್ ಸಿನೆಮಾ ಅಂತ ಹೇಳಿಕೊಂಡು ಖುಷಿ ಪಡುವಂಥದ್ದು ಏನೂ ಮಾಡಲಿಲ್ಲ.  ಅವರು ವೈಯಕ್ತಿಕವಾಗಿ, ಆಧ್ಯಾತ್ಮಿಕವಾಗಿ ಎಷ್ಟು ಪಕ್ವವಾಗುತ್ತಾ ಬಂದರೂ, ಅವರ  ಚಿತ್ರಗಳು ಅಷ್ಟೇ ಕಳಪೆಯಾಗುತ್ತ ಹೋದವು. ಸುದೀಪರ 'ದರ್ಶನ' ಆದಾಗ  ಇವೆಲ್ಲ  ಕೇವಲ ಮಾರುಕಟ್ಟೆಯ  ಅನಿವಾರ್ಯತೆಗಳು ಹುಟ್ಟುಹಾಕಿದ ಹೊಸಮುಖಗಳು ಅಂದುಕೊಳ್ಳುವಾಗಲೇ, ಮೈ ಆಟೋಗ್ರಾಫ್ ನಂಥ ಒಳ್ಳೆ ರಿಮೇಕ್ ಮಾಡಿ, ರಾಮ್ ಗೋಪಾಲ್ ವರ್ಮರಂಥವರ ಸಹವಾಸ ಬೆಳಸಿಕೊಂಡ ಮೇಲೆ, ಅಲ್ಲಿ-ಇಲ್ಲಿ ಕಲಿತದ್ದನ್ನೆಲ್ಲ ಸೇರಿಸಿ ಸುದೀಪ್ ಏನೋ ಮಾಡ್ತಾರೆ ಅಂತ ಕಾದದ್ದೇ ಬಂತು. ಸ್ನೇಹಿತನಿಗಾಗಿ ರಿಮೇಕು, ಸ್ವಮೇಕಿನ ಲಾಸಿಗೆ ಮತ್ತೆ ರಿಮೇಕು, ಕ್ರಿಕೆಟ್ಟು, ಜಗಳ, ಕಿರಿಕ್ಕು ಇದೆಲ್ಲದರ ಮೂಲಕ ತಮ್ಮ ಎನೆರ್ಜಿ ಕಳೆದುಕೊಳ್ಳುತ್ತಿರುವ ಸುದೀಪ್ ಹೊಸ ದೀಪ ಬೆಳಗ್ತಾರೆ ಅಂದುಕೊಳ್ಳೋದು ಮೂರ್ಖತನ. ದರ್ಶನ್ ಇಂಥದ್ದೆನಾದ್ರೂ ಮಾಡ್ತೀನಿ ಅಂತ ಯಾವತ್ತೂ ಸೂಚನೆ ಕೊಟ್ಟಿಲ್ಲ.  ರಿಯಲ್ ಎಸ್ಟೇಟ್ ನಿಂದ ಬಂದ ಅರ್ಥಿಕ ಬದಲಾವಣೆ ಕನ್ನಡ ಚಿತ್ರರಂಗದಲ್ಲಿ ಅನೇಕ ಅಬ್ಬೆಪಾರಿಗಳನ್ನು ನಿರ್ದೇಶಕರನ್ನಾಗಿ ನಟರನ್ನಾಗಿ ಮಾಡಿತು. ಮಳೆ ಜೋರಾಗಿ ಬಂದಾಗ ಉಂಟಾಗುವ ಪ್ರವಾಹದಲ್ಲಿ ಉಪಯೋಗಿಯಾದ  ನೀರಿನ ಜೊತೆ ಕಸ ಕಡ್ಡಿ ಮಣ್ಣು ಮಸಿ ಕೂಡ ಸೇರಿಕೊಂಡಿರುತ್ತೆ.  ಕೆಲದಿನಗಳ ನಂತರ ಎಲ್ಲ ತಿಳಿಯಾಗುತ್ತೆ. ಇಲ್ಲಿಯೂ ಹಾಗೆ ಆಯ್ತು.  ಆದರೆ ಕೆಲವರು ಭರವಸೆ ಮೂಡಿಸಿದ್ದರು. ದೊಡ್ಡ ಸ್ಟಾರ್ ಆಗುತ್ತಾರೆ ಎಂಬ ಕಲ್ಪನೆಯೂ ಇಲ್ಲದ ಗಣೇಶ್ ಏಕಾ ಏಕಿ ಗೋಲ್ಡನ್ ಸ್ಟಾರ್ ಆಗಿ ಭರವಸೆ ಮೂಡಿಸಿದ್ದರು. ವಿಜಿಯಿಂದ ಮಾರ್ಕೆಟ್ ದುನಿಯಾ ದೊಡ್ಡದಾಯ್ತು. ಆದರೆ ಅದರಾಚೆಗೆ ಎಲ್ಲ ಅಯೋಮಯ. ಧಾರಾವಾಹಿಗೆ ಪಡೆದ ಸಂಭಾವನೆಗೆ ನಟಿಸಿ ಚೆಲುವಿನ ಚಿತ್ತಾರ ಬಿಡಿಸಿದ ಗಣೇಶ್ ಎಷ್ಟೇ ಅಸಮಾಧಾನವಿದ್ದರೂ ಒಂದು ಹಿಟ್ ಗಾಗಿ  ಹಳೆ ಗಂಡನ ಪಾದವೇ ಗತಿ ಅಂತ ಕಲಾಸಾಮ್ರಾಟರಿಗೆ ಸಾಮಂತರಾದದ್ದು ಪತ್ನಿಲೀಲಾವಿನೋದ. ಮಹತ್ತರ ನಿರೀಕ್ಷೆ ಮೂಡಿಸಿದ ಭಟ್ರು ಬೇರೆಯವರ ಚಿತ್ರಕ್ಕೆ ಬರೆದ  ಹಾಡುಗಳಲ್ಲಿ ವಿಭಿನ್ನತೆ ಉಳಿಸಿಕೊಂಡರೂ ತಮ್ಮ ಚಿತ್ರಗಳ ಸಂಭಾಷಣೆಯಲ್ಲಿ, ನಾಯಕ ನಟರ ವಿಷಯದಲ್ಲಿ ಉಡಾಫೆಯಲ್ಲಿ ಏಕತಾನತೆಗೆ  ಅಂಟಿಕೊಂಡು ಸೋತ ಚಿತ್ರಗಳನ್ನೂ ಗೆದ್ದಿವೆ ಅಂತ ಬಿಂಬಿಸುವ ಪ್ರಯತ್ನ ಮಾಡಿ ಸಿನೆಮಾ ಬಗ್ಗೆ ಇಷ್ಟು ಪ್ರೌಢವಾಗಿ ಮಾತನಾಡುವ ಭಟ್ಟರು ಕೂಡ ಸೋಲನ್ನು ಒಪ್ಪಿಕೊಳ್ಳದೆ ಕನ್ನಡಿಗರನ್ನು ಮತ್ತಷ್ಟು ಹತಾಶೆಗೆ ತಳ್ಳಿದ್ದಾರೆ.  ಇಂತಿ ನಿನ್ನ ಪ್ರೀತಿಯ ದಲ್ಲಿ ನಡೆದ ಕೆಲವು ತಪ್ಪುಗಳನ್ನು ಸರಿಪಡಿಸುವ ಬದಲಾಗಿ ಸೂರಿ ಕೂಡ ಸ್ಟಾರ್ ಮಾಯೆಯ ಸೇಫ್ ಜೊನ್ ಗೆ ಹೋಗಿದ್ದಾರೆ. ಇದು ನಮ್ಮ ಕನ್ನಡ ಸಿನೆಮಾ. ನಮ್ಮವರು ಮಾಡಿರೋದು ಅಂತ. ಅಂತ ನಾವು ಪರಭಾಷೆಯ ಸ್ನೇಹಿತರಿಗೆ ಹೆಮ್ಮೆಯಿಂದ ತೋರಿಸುವಂಥ ಸಿನೆಮಾಗಳನ್ನು ಯಾರೂ ಮಾಡುತ್ತಿಲ್ಲ. yeak , ಕನ್ನಡ ಸಿನೆಮಾ ನಾ? ಅಂತ ಮೂಗು ಮುರಿಯುವ ಜನರ ಸಂಖ್ಯೆ ಬೆಳೆಯುತ್ತಿದೆ.ಕನ್ನಡಿಗರಲ್ಲೂ ಕೂಡ. ಇತ್ತೀಚಿಗೆ ಆರಕ್ಷಕ ಚಿತ್ರದ ತುಣುಕು ಟಿವಿಯಲ್ಲಿ ಕಾಣಿಸಿತು. ಅದರಲ್ಲಿ ನಾಯಕ ಪೋಲಿಸ್ ಯುನಿಫಾರ್ಮ್ ಜೊತೆಗೆ, ತಲೆ ಮೇಲೆ ಪೊಲಸ್ ಟೋಪಿ, ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡು ನಾಯಕಿಯ ಜೊತೆ ಹುಲ್ಲುಗಾವಲಿನ ಮೇಲೆ ನೃತ್ಯ ಮಾಡ್ತಾನೆ. ಇಂಥ ದೃಶ್ಯಗಳನ್ನು ತೋರಿಸಿದರೆ ಯಾವ ಸ್ನೇಹಿತರು ನಗದೆ ಇರೋಕೆ ಸಾಧ್ಯ...? ನೃತ್ಯ ಮಾಡುವಾಗ ಪೋಲಿಸ್ ಟೋಪಿ ಕನ್ನಡಕ ಎಷ್ಟು funny ಯಾಗಿ ಕಾಣುತ್ತೆ ಅನ್ನೋ ಅರಿವು ಚಿತ್ರೀಕರಣದಲ್ಲಿ ಯಾರಿಗೋ ಬರೋದೆ ಇಲ್ಲವಾ..?  ವಿಷ್ಣು ಅವರ ಕೋನೆ ಚಿತ್ರದಲ್ಲಿ  "ಚಾಮುಂಡಿ ತಾಯಿ ಆಣೆ" ಹಾಡಿನ ನೃತ್ಯ ಸಂಯೋಜನೆ ನೋಡಿ ಯಾವನಿಗಾದರೂ ಬೇಸರವಾಗದೆ ಇರದು. ಏನಾದ್ರೂ ಕೇಳಿದ್ರೆ ನಮ್ಮಲ್ಲಿ ಕತೆ ಇಲ್ಲ ಸಾರ್ ಅಂತಾರೆ. ತಮಿಳಿನ ಸೂರ್ಯನಿಗೆ ಸಿಗುವ ಹೊಸ ರೀತಿಯ ಕಥೆಗಳು ನಮ್ಮಲ್ಲಿ ಯಾರಿಗೂ ಯಾಕೆ ಸಿಗೋದಿಲ್ಲ.? ಅವರು ಮಾಡಿ ಆದ ಮೇಲೆ ಕಾಪಿ ಹೊಡೆಯೋಕೆ ಮಾತ್ರ ನಮಗೆ ಬರುತ್ತೆ.  ಚಿಕ್ಕ ಬಜೆಟ್ ನಲ್ಲಿ ಚೊಕ್ಕವಾಗಿ ಚಿತ್ರ ಮಾಡಿ ದೊಡ್ಡ ಲಾಭವನ್ನು ಕೊಡಿಸುವ ತಾಕತ್ತು ನಮ್ಮ ನಿರ್ದೇಶಕರುಗಳಿಗೆ ಇಲ್ಲದಾಗಿದೆ. ಅಂತಹ  ನಿರ್ದೆಶರನ್ನು ಗುರಿತಿಸಿ ಅವರಿಗೆ ಅವಕಾಶ ಕೊಡುವ ಸಿನೆಮಾ ಜ್ದ್ನಾನ ಇರುವ ನಿರ್ಮಾಪಕರು ತಮ್ಮ ತಮ್ಮ ವಂಶದ ಕುಡಿಗಳನ್ನು ಸ್ಟಾರ್ ಮಾಡುವಲ್ಲಿ ಬ್ಯುಸಿಯಾಗಿದ್ದರೆ.  ಜ್ದ್ನಾನ ಇಲ್ಲದ ನಿರ್ಮಾಪಕರು ರೀಲು ಸುತ್ತಿಸುತ್ತಿದ್ದಾರೆ. ತೆವಲು ತೀರಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕ ಮಾತ್ರ ಭೇರೆ ಭಾಷೆಯ ಒಳ್ಳೊಳ್ಳೆ ಚಿತ್ರಗಳನ್ನು ಇಂಟರ್ನೆಟ್ ನಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಂಡು ಸುಖವಾಗಿದ್ದಾನೆ. ಕನ್ನಡದವರಿಗೆ ಉಗಿಯುತ್ತಲೇ ಇದಾನೆ.

No comments:

Post a Comment