ಭಟ್ಟರಿಗೆ ನಮಸ್ಕಾರ.
ನಾನೊಬ್ಬ ಸಾಮಾನ್ಯ ಸಿನೆಮಾ ವೀಕ್ಷಕ. ನಿಮ್ಮ ಎಲ್ಲ ಚಿತ್ರಗಳನ್ನು ನೋಡಿದ್ದೇನೆ. ತಕ್ಕ ಮಟ್ಟಿಗೆ ಇಷ್ಟ ಕೂಡ ಆಗಿದ್ದವು. ಆದರೆ ನಿಮ್ಮ ಪರಮಾತ್ಮ ಚಿತ್ರವನ್ನು ಮೊದಲ ವಾರವೇ ಹೆಚ್ಚಿನ ದುಡ್ಡು ಕೊಟ್ಟು ನೋಡಲು ಹೋಗಿ ನಿಮ್ಮ ಮೇಲೆ ಅತಿಯಾದ ಸಿಟ್ಟು ಬಂತು. ಯಾಕೆಂದರೆ ಇಡೀ ಚಿತ್ರ ಅಸಹಜವಾಗಿದೆ. ನಿಮ್ಮನ್ನು ತೆಗಳುವ ಉದ್ದೇಶ ನಂಗೆ ಇಲ್ಲ. ಆದರೆ ದುಡ್ಡು ಕೊಟ್ಟು ಚಿತ್ರ ನೋಡುವ ಒಬ್ಬ ಪ್ರೇಕ್ಷಕನಾಗಿ ನನಗೆ ಅನಿಸಿದ್ದನ್ನು ಹೇಳುವ ಹಕ್ಕು ನನಗೆ ಇದೆ. ಆದರೆ ನನ್ನ ಅಭಿಪ್ರಾಯವನ್ನು ನೀವು ಹೇಗೆ ಸ್ವೀಕರಿಸುತ್ತೀರಿ ಅನ್ನೋದು ನಿಮಗೆ ಬಿಟ್ಟದ್ದು. ಪರಮಾತ್ಮನ ಬಗ್ಗೆ ಆಮೇಲೆ ಹೇಳ್ತೀನಿ. ಅದಕ್ಕಿಂತ ಮುಖ್ಯವಾಗಿ ನಾನು ಈ ಪತ್ರ ಬರೆಯಲು ಕಾರಣ, ನಿಮ್ಮ ಮೇಲೆ ನನಗಿರುವ ಇನ್ನೊಂದು ಬೇಸರ. ಅದೇನೆಂದರೆ...
ನಿಮ್ಮ ಚಿತ್ರಗಳಲ್ಲಿ ಸಂಸ್ಕೃತ ಭಾಷೆಯ ಬಳಕೆ ಮಾಡುವ ಸಂದರ್ಭಗಳಲ್ಲಿ ನೀವು ತೋರುವ ಅಸಡ್ಡೆ.
೧. ಮುಂಗಾರು ಮಳೆ ಚಿತ್ರದಲ್ಲಿ ಮದುವೆ ಮನೆಗೆ ಪುರೋಹಿತರು ಬರುವ ಹಾಸ್ಯ ದೃಶ್ಯದಲ್ಲಿ ಅನಂತ್ ನಾಗ್ ರವರು ನೀವು ಸಂಸ್ಕೃತ ಓದಿದ್ದೀರೋ..? ಅಥವಾ ಇಂಗ್ಲಿಷೋ..? ಎಂದು ಕೇಳಿದಾಗ.. ನಿಮ್ಮದೇ ದ್ವನಿಯಲ್ಲಿ ಹೇಳಿದ ಸಂಭಾಷಣೆ ಇದೆ."ಏನ್ ಸ್ವಾಮೀ, ಚತುರ್ವೇದ ಅಧ್ಯಯನಾನೂ ಆಗಿದೆ, ಸಂಸ್ಕೃತ ಕೂಡ ಆಗಿದೆ." ಅಂತ ಪುರೋಹಿತರು ಹೇಳುತ್ತಾರೆ. ನಾನು ನಿಮ್ಮ ಗಮನಕ್ಕೆ ತರುವ ವಿಷಯ ಏನೆಂದರೆ, ಭಾರತದಲ್ಲಿ ಚತುರ್ವೇದ ಅಧ್ಯಯನ ಮಾಡಿದವರು ಯಾರೂ ಈಗ ಬದುಕಿಲ್ಲ. ಯಾಕೆಂದರೆ ಕೇವಲ ಒಂದು ವೇದ ಪೂರ್ತಿಯಾಗಿ ಅಭ್ಯಾಸ ಮಾಡಲು ಹತ್ತು ವರ್ಷ ಬೇಕು. ಋಗ್ವೇದದಲ್ಲಿ 114 ಅದ್ಯಾಯಗಳು ಇವೆ. (16000 ಮಂತ್ರಗಳು) ಇನ್ನು ನಾಲ್ಕೂ ವೇದಗಳನ್ನು ಗುರುಕುಲದಲ್ಲಿ ಇದ್ದು ಅಭ್ಯಾಸ ಮಾಡಲು ಕನಿಷ್ಠ 35 ವರ್ಷ ಬೇಕು.
ಇನ್ನೊಂದು ಮುಖ್ಯ ವಿಷಯ ಏನೆಂದರೆ,
ವೇದ ಓದಿದವರಿಗೆ ಮದುವೆ ಮಾಡಿಸಲು ಬರೋದಿಲ್ಲ. ಸಂಸ್ಕೃತ ಓದಿದವರಿಗೂ ಕೂಡ.
ಮದುವೆಯಲ್ಲಿ ವೇದ ಮಂತ್ರಗಳ ಉಪಯೋಗ ಇರಬಹುದು. ಆದರೆ ಮದುವೆ ಮಾಡಿಸಲಿಕ್ಕೆ ಅಪ್ಪನ ಹತ್ತಿರ ಅಥವಾ ಅಜ್ಜನ ಹತ್ತಿರ ಎರಡು ತಿಂಗಳು ಪ್ರಯೋಗ ವಿಧಾನ ಅಭಾಸ ಮಾಡಿದ್ರೆ ಸಾಕು. ಇವತ್ತು ಮದುವೆ ಮಾಡಿಸುವ ಪುರೋಹಿತರಲ್ಲಿ 98 % ಪುರೋಹಿತರುಗಳಿಗೆ ವೇದ ಗೊತ್ತಿಲ್ಲ. ಸಂಸ್ಕೃತವೂ ಗೊತ್ತಿಲ್ಲ. ವೇದ ವಿದ್ವಾಂಸರುಗಳು ಪೌರೋಹಿತ್ಯ ಮಾಡೋದೆ ಇಲ್ಲ. ಹೀಗಾಗಿ ಮುಂಗಾರು ಮಳೆಯಲ್ಲಿ ನೀವು ಬರೆದ "ಏನ್ ಸ್ವಾಮೀ, ಚತುರ್ವೇದ ಅಧ್ಯಯನಾನೂ ಆಗಿದೆ, ಸಂಸ್ಕೃತ ಕೂಡ ಆಗಿದೆ." ಈ ಮಾತು ಅಪಹಾಸ್ಯಕರವಾಗಿದೆ.
2. ಇನ್ನು ಪಂಚರಂಗಿ ಚಿತ್ರದಲ್ಲಿ ನಾಯಕ ನಾಯಕಿಯನ್ನು ನೋಡಿದಾಗ ಕಾಲಿಗೆ ಬೀಳುವ ದೃಶ್ಯದಲ್ಲಿ "ಓಂ ನಮೋ ದಶ ಗಯತ್ರೀಂ ಜಪ್ತ್ವಾ" ಅಂತ ನಾಯಕ ಹೇಳುತ್ತಾನೆ. ಆ ವಾಕ್ಯದ ಅರ್ಥ ಆ ದೃಶ್ಯಕ್ಕೆ ಹೊಂದುವುದೇ ಇಲ್ಲ. ಆ ವಾಕ್ಯದ ಅರ್ಥ ಏನೆಂಬುದು ನಿಮಗೆ ಗೊತ್ತೋ..ಅಥವಾ ಇಲ್ಲವೋ..ಅನ್ನೋದು ನನಗೆ ಗೊತ್ತಿಲ್ಲ. ಆದರೆ ಒಳ್ಳೆಯ ಕನ್ನಡ ಬರೆಯುವ ನೀವು ಈ ರೀತಿಯ ಅಸಂಬದ್ಧವಾದ ಸಾಲುಗಳನ್ನು ಬರೆದದ್ದು ನೋಡಿ ಬೇಸರ ಆಯ್ತು.
ಇನ್ನು ಪರಮಾತ್ಮನ ವಿಷಯಕ್ಕೆ ಬರುವುದಾದರೆ,
"ಪರಮಾತ್ಮ" ಶಬ್ದಕ್ಕೆ "ಒಳ್ಳೆಯ ಮನಸಿನವನು" ಅಥವಾ ಒಳ್ಳೆಯ ಹೃದಯ ಉಳ್ಳವನು ಅನ್ನೋ ಅರ್ಥ ನಿಮ್ಮ ಚಿತ್ರದಲ್ಲಿ ಧ್ವನಿಸುತ್ತದೆ. ಆದರೆ "ಆತ್ಮ" ಅನ್ನೋ ಶಬ್ದಕ್ಕೆ ಇರುವ ನಿಜವಾದ ಅರ್ಥ ಮನಸು-ಹೃದಯ ಈ ಎರಡೂ ಅಲ್ಲ ."ಪರಮ" ಅಂದರೆ "ಒಳ್ಳೆಯ" ಅಂತ ನಿಮಗೆ ಯಾರು ಹೇಳಿದರೋ ಗೊತ್ತಿಲ್ಲ. ಪರಮ+ ಆತ್ಮ ಈ ಎರಡೂ ಶಬ್ದಗಳು ಸಂಸ್ಕೃತ ಭಾಷೆಯವು. ಅವುಗಳನ್ನು ಯಥಾವತ್ತಾಗಿ ಕನ್ನಡದಲ್ಲಿ ಕೂಡ ಉಪಯೋಗಿಸಲಾಗುತ್ತೆ. ಅವುಗಳ ಅರ್ಥ ಕನ್ನದಲ್ಲಿಯೂ ಕೂಡ ಬದಲಾಗುವುದಿಲ್ಲ.
ಸಾಲು ಸಾಲಾಗಿ ಬಂದ ರಜಾ ದಿನಗಳು, ಪುನೀತ್ ತಾರಾಮೌಲ್ಯ, ನಿಮ್ಮ ಚಿತ್ರದ ಬಗೆಗಿನ ನಿರೀಕ್ಷೆ, ಹರಿಕೃಷ್ಣರ ಸಂಗೀತ ಇವೆಲ್ಲ ಸೇರಿ ಚಿತ್ರದ ಗಳಿಕೆ ಮೊದಲ ವಾರವೇ ದಾಖಲೆ ಮೊತ್ತ ಮೀರಿದ್ದು ಸಹಜ. ಆದರೆ ಚಿತ್ರ ನೋಡಿದ ಪ್ರೇಕ್ಷಕನಿಗೆ ನಿರಾಸೆ ಖಂಡಿತ ಆಗಿದೆ. ಯಾಕೆಂದರೆ ಚಿತ್ರ ಕಳಪೆಯಾಗಿದೆ. ನೀವು ಒಂದು ಉತ್ತಮ ಭಾವನೆಯನ್ನು ಪ್ರೆಶಕನ ಮನಸಿಗೆ ದಾಟಿಸಲು ಪ್ರಯತ್ನಿಸಿರಬಹುದು. ಆದರೆ ಚಿತ್ರದ ಅನೇಕ ಸಂದರ್ಭಗಳಲ್ಲಿ 'ಅಸಹಜತೆ' ಇರುವುದರಿಂದ ಹೀಗಾಗಿದೆ.
ಉದಾಹರಣೆ. 1 , ಬಹಳ ಕ್ರಿಯಶೀಲನಾದ ನಾಯಕ ಯಾವುದೇ ವಿಶೇಷ ಕಾರಣಗಳಿಲ್ಲದೆ, ನಾಯಕಿಯನ್ನು ತೀವ್ರವಾಗಿ ಪ್ರೀತಿಸುತ್ತಾನೆ. ನಾಯಕಿ ಕೂಡ ನಾಯಕನ ಗುಣ-ದೋಷಗಳನ್ನು ನೋಡದೆ ವಿನಾ ಕಾರಣ ಪ್ರೆಮಿಸುತ್ತಾಳೆ.
ಉದಾಹರಣೆ 2 , ಗನ್ನುಗಳನ್ನು ಹಿಡಿದು ಭಯಾನಕ ಸಹಾಯಕರನ್ನು ಇಟ್ಟುಕೊಂಡ ನಾಯಕಿಯ ಅಜ್ಜ, ಮೊಮ್ಮಗಳು ರಾತ್ರಿ ಮನೆಗೆ ಬಾರದೇ ಹೋದರೂ ನಾಯಕನ ಜೊತೆ jolly ride ಮಾಡುತ್ತಿದ್ದಾಗಲೂ ಕೂಡ ಹುಡುಕಾಡುವ ಪ್ರಯತ್ನ ಮಾಡುವುದಿಲ್ಲ, ಮತ್ತು ಮಾರನೆಯ ದಿನ ಬೆಳಿಗ್ಗೆ ನಿಶ್ಚಿಂತೆಯಿಂದ ಕಂಬಳ ನೋಡಲು ಹೋಗುತ್ತಾನೆ.
ಉದಾಹರಣೆ 3 . ನಾಯಕನ ಸ್ನೇಹಿತ ಸ್ನೇಹಿತೆಯರು ಅವನನ್ನು ಹುಡುಕಿಕೊಂಡು ಹಳ್ಳಿಗೆ ಬಂದಾಗ ನಾಯಕ ಅಸಹಜವಾಗಿ ಅವರನ್ನು ರಸ್ತೆಯಲ್ಲಿ ಬಿಟ್ಟು ತನ್ನ ಹುಡುಗಿಯನ್ನು ಕರೆದುಕೊಂಡು ಮನೆಗೆ ಹೋರಟು ಹೋಗುತ್ತಾನೆ. ಅವನು ಕರೆಯದೆ ಹೋದರೂ ಕೂಡ ಅವನ ಸ್ನೇಹಿತರು ಹಿಂಬಾಲಿಸಿಕೊಂಡು ಹೋಗುತ್ತಾರೆ. ಆಶ್ಚರ್ಯವೆಂದರೆ ಅಲ್ಲಿ ಎಲ್ಲರೂ ಸೇರಿ ಹಾಡಿನಲ್ಲಿ ಡಾನ್ಸ್ ಮಾಡುತ್ತಾರೆ.
ನಾಯಕನ ಆಧ್ಯಾತ್ಮದ ಹುಡುಕಾಟ- ಪರ್ವತಾರೋಹಣ ಮುಂತಾದವುಗಳು ನಿಷ್ಪ್ರಯೋಜಕ. ಹಾಗೂ ನಾಯಕಿಯನ್ನು ನಾಯಕ ಎತ್ತಿಕೊಂಡು ಹೋಗುವ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳ ಅತಿಯಾದ ಕುಹಕ-ವ್ಯಂಗ್ಯ ಸಾಮಾನ್ಯ ಪ್ರೇಕ್ಷಕನಿಗೂ ಬೇಸರ ತರಿಸುತ್ತದೆ.
ಇನ್ನೂ ಅನೇಕ ಕಾರಣಗಳು ಈ ಚಿತ್ರದ ಬಗ್ಗೆ ಬೇಸರ ಮೂಡಲು ಕಾರಣವಾಗಿವೆ.
ಉಳಿದಂತೆ ಮೊನ್ನೆ ಜನಶ್ರೀ ವಾಹಿನಿಯಲ್ಲಿ ಬಿ. ಸುರೇಶ -ಶೈಲಜಾ ನಾಗ್ ಅವರ ಜೊತೆಯಲ್ಲಿ ನಿಮ್ಮನ್ನು ನೋಡಿದೆ. ನಿಮ್ಮ ಮಾತುಗಳನ್ನು ಕೇಳುವುದೇ ಒಂದು ಹಬ್ಬ. ನಿಮ್ಮ ಮುಂದಿನ ಚಿತ್ರಕ್ಕೆ ಕಾಯುತ್ತೇನೆ. ಹಣ ಕೊಟ್ಟು ಚಿತ್ರ ಮಂದಿರದಲ್ಲಿಯೇ ನೋಡುತ್ತೇನೆ. ಇನ್ನೊಮ್ಮೆ ನಿರಾಸೆ ಮಾಡಬೇಡಿ.
ನನ್ನ ಯಾವುದೇ ಮಾತಿಗೂ ನಿಮ್ಮನ್ನು ನೋಯಿಸುವ ಉದ್ದೇಶ ಇಲ್ಲ. ತಪ್ಪಾಗಿದ್ದರೆ ಕ್ಷಮಿಸಿ.
ನಿಮ್ಮ ಹುಡುಗ
ದತ್ತರಾಜ್
(ಈ ಪತ್ರವನ್ನು ಅವರಿಗೆ ಕಳಿಸಿದ್ದೆ. ಯಾವುದೇ ಉತ್ತರವಿಲ್ಲ. ಆದ್ದರಿಂದ ಇಲ್ಲಿ ಹಾಕಿದ್ದೇನೆ)

No comments:
Post a Comment