Saturday, June 23, 2012

"ಶಿಕಾರಿ" ಯನ್ನು ಹತ್ತಿರದಿಂದ ನೋಡಿದಾಗ


ಒಳ್ಳೆ ಚಿತ್ರಗಳು ಬರುವುದಿಲ್ಲ ಎಂದು ಬೊಬ್ಬೆ ಹೊಡೆಯುವ ಕನ್ನಡದ ಸದಭಿರುಚಿಯ ಪ್ರೇಕ್ಷಕರ ಮನಸಿನಲ್ಲಿ ಆಸೆಯನ್ನು ಹುಟ್ಟಿಸಿ ಮತ್ತು ಅವರ ಸಹನೆ ಪರೀಕ್ಷಿಸಿ, ಪರೀಕ್ಷೆಗಳು, ಮತ್ತು IPL ಶುರುವಾಗುವ ಯಡವಟ್ಟು ವೇಳೆಯಲ್ಲಿ ತಕ್ಕ ಪ್ರಚಾರವಿಲ್ಲದೆ ತ್ರಿಭುವನ್ ನಲ್ಲಿ ಶಿಕಾರಿಯನ್ನು ತೋರಿಸಿದ ಮಂಜು ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳುತ್ತಾರೆ. ಅದ್ಭುತ ತಾಂತ್ರಿಕತೆಯಿಂದ ಕೂಡಿದ ..., ಖಂಡಿತವಾಗಿಯೂ ಹೊಸದು ಎಂದು ಹೇಳಬಹುದಾದ ಕಥೆಯುಳ್ಳ..ಮಮ್ಮುಟ್ಟಿ ಯಂತಹ ಸ್ಟಾರ್ ನಟಿಸಿದ ಚಿತ್ರವನ್ನು ಬಿಡುಗಡೆ ಮಾಡುವಲ್ಲಿ ಮಂಜು ತೋರಿರುವ ನಿರುತ್ಸಾಹ ಆಶ್ಚರ್ಯಕ್ಕೆ ಮೊದಲ ಕಾರಣ. ಕನ್ನದಲ್ಲಿ ಮಾರ್ಕೆಟ್ ಇಲ್ಲದೇ ಹೋದರೂ ಕೂಡ ದುಬಾರಿ ಬೆಲೆ ತೆತ್ತು ಮಮ್ಮುಟ್ಟಿಯವರನ್ನು ಈ ಚಿತ್ರಕ್ಕೆ ಕರೆತಂದದ್ದು ಎರಡನೇ ಕಾರಣ ಮತ್ತು ಅಭಯಸಿಂಹರ ಮೇಲೆ ನಂಬಿಕೆ ಇಟ್ಟು ಇಂತಹ ಚಿತ್ರಕ್ಕೆ ಕೆ. ಮಂಜು ಹಣ ಹಾಕಲು ಮನಸು ಮಾಡಿದ್ದು ಆಶ್ಚರ್ಯದ ಇನ್ನೊಂದು ಕಾರಣ. 

ಎರಡು ವರ್ಷಗಳ ಹಿಂದೆ ಅಭಯಸಿಂಹ ಶಿಕಾರಿ ಹೊರಟಾಗ ಆಶ್ಚರ್ಯವಾದದ್ದು ನಿಜ. ಏಕೆಂದರೆ ಒಮ್ಮೆಲೇ ಕೆ. ಮಂಜು ಮತ್ತು ಮಮ್ಮುಟ್ಟಿ ಯಂತಹ ಘಟಾನುಘಟಿಗಳ ಜೊತೆ ಹೆಗಲು ತಾಕಿಸಿ ಹೊರಟಿದ್ದರು. ಪುಣೆಯಲ್ಲಿ ಸಿನೆಮಾ ಅಧ್ಯನ ಮಾಡಿರುವ, ಆದರೆ ಇನೂ ಅನುಭವದಿಂದ ಪಳಗದ ಸಿಂಹ ಶಿಕಾರಿಯ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಜವಾಬ್ದಾರಿಗಳನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ. ಅವರು ಬರೆದ ಕಥೆ ಅದ್ಭುತವಾಗಿದ್ದರೂ, ಆ ಕಥೆಯನ್ನು ಸಮರ್ಪಕವಾಗಿ ತೆರೆ ಮೇಲೆ ತರುವಲ್ಲಿ ಎಡವಿದ್ದಾರೆ. ಪಳಗಿದವರಿಂದ ಸಂಭಾಷಣೆ ಬರೆಸಿದ್ದರೆ ಚಿತ್ರ ಇನ್ನೂ ಸ್ವಲ್ಪ ಚುರುಕು ಪಡೆಯುತ್ತಿತ್ತು. ಚಿತ್ರದಲ್ಲಿನ ಗ್ರಾಂಥಿಕ ಭಾಷೆ ಸಹನೆ ಪರೀಕ್ಷಿಸಿದರೆ, ನಾಯಕ ಮತ್ತು ನಾಯಕಿಯ ನಡುವಿನ ಸಂಭಾಷಣೆಯ ವೇಳೆ ಒಮ್ಮೆ ಬಹುವಚನ, ಒಮ್ಮೆ ಏಕವಚನ, ಮತ್ತೆ ಬಹುವಚನದ ಸಂಬೋಧನೆ ಗೊಂದಲಕ್ಕೀಡು ಮಾಡುತ್ತದೆ. ಅವರಿಬ್ಬರಲ್ಲಿ ಏಕವಚನದ ಸಂಬೋಧನೆಗಿಳಿಯುವಂಥ ಯಾವ ಆಪ್ತ ಸನ್ನಿವೇಶವೂ ಬರುದಿಲ್ಲ. ನಾಯಕನ್ನು ನೀನು ಎಂದು ಸಲಿಗೆಯಿಂದ ಕರೆಯುವ ನಾಯಕಿ ಒಮ್ಮೆಲೇ ಮತ್ತೆ ಬಹುವಚನಕ್ಕೆ ಹಾರಿದಾಗ ಪ್ರೇಕ್ಷಕ ಕುರ್ಚಿಯಲ್ಲೇ ಹಾರುತ್ತಾನೆ. ಡಬ್ಬಿಂಗ್ ನಲ್ಲಿ ಇದೆಲ್ಲವನ್ನೂ ಸರಿಪಡಿಸಬಹುದಿತ್ತು. ಚಿತ್ರದಲ್ಲಿ ಗುಜರಾತಿ ಎಸ್ಟೇಟ್ ಬ್ರೋಕರ್ ನ ಪಾತ್ರಕ್ಕೆ ಮಿಮಿಕ್ರಿ ದಯಾನಂದ್ ಅವರಿಂದ ಮಾಡಿಸಿದ ಡಬ್ಬಿಂಗ್ ಘೋರವಾಗಿದೆ. ಮಮ್ಮುಟ್ಟಿ ದ್ವನಿಯಲ್ಲಿ ಮೂಡಿ ಬಂದ ಕನ್ನಡ ಮತ್ತು ಅಭಯಸಿಂಹರ ವಿಫಲ ಸಂಭಾಷಣೆ ಪ್ರೇಕ್ಷಕ ಕಥೆಯಲ್ಲಿ ಪ್ರವೆಶಿಸಲಿಕ್ಕೆ ಅಡ್ಡಿ ಮಾಡುತ್ತವೆ. ಆದರೆ ಚಿತ್ರದ ವಸ್ತ್ರ ವಿನ್ಯಾಸ, ಛಾಯಾಗ್ರಹಣ, ಪಾತ್ರಗಳ ಆಯ್ಕೆ, ಹಿನ್ನೆಲೆ ಸಂಗೀತ... ಚಿತ್ರೀಕರಣ ತಾಣ...ಮುಂತಾದ ಎಲ್ಲವೂ ಅದ್ಭುತವಾಗಿವೆ. ಪೂನಂ ಬಜ್ವ ಎಂಬ ಪುಣೆಯ ನಟಿ ಚಿತ್ರವನ್ನು ಇನ್ನೂ ಚೆಂದ ಕಾಣುವಂತೆ ಮಾಡಿದ್ದಾಳೆ. ಮಮ್ಮುಟ್ಟಿಗೆ ಅಭಿನಯ ಸರಾಗ. ಆದರೆ ಸಂಭಾಷಣೆ ಕೈ ಕೊಟ್ಟಿರುವುದರಿಂದ ಪ್ರಭಾವ ಬೀರುವುದಿಲ್ಲ. ಶರತ್ ಲೋಹಿತಾಶ್ವ ಪಾತ್ರದ ವಿಕ್ಷಿಪ್ತ ವರ್ತನೆಗೆ ಕೊನೆಗೂ ತಾರ್ಕಿಕ ಕಾರಣ ದೊರೆಯುವುದಿಲ್ಲ. ಗ್ರಾಫಿಕ್ ನಲ್ಲಿ ಮಾಡಿದ ಹುಲಿ ಸಹಜ ಮತ್ತು ಪ್ರಭಾವಶಾಲಿಯಾಗಿ ಕಂಡರೂ ಕೂಡ ಕಥೆಯಲ್ಲಿ ಅದರ ಪ್ರಾಮುಖ್ಯತೆ ಅಚಾನಕ್ಕಾಗಿ ಮಾಯವಾಗುವುದರಿಂದ...ಪ್ರೇಕ್ಷಕ ಹುಲಿಯನ್ನು ಮರೆತೇ ಬಿಡುತ್ತಾನೆ. ಕೇರಳದಲ್ಲಿ ಈ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು ಬಹಳ ಟೀಕೆ ವ್ಯಕ್ತವಾಗಿದೆ ಮತ್ತು ಮಮ್ಮುಟ್ಟಿ ಬಹಳ ಖಾರವಾಗಿ ಎಲ್ಲ ಟೀಕೆ ಗಳಿಗೆ ಪ್ರತಿಕ್ರಯಿಸಿದ್ದಾರೆ. ಕರ್ನಾಟಕದ ಎಲ್ಲ ಪತ್ರಿಕೆಗಳೂ ಇಂತಹ ಉತ್ತಮ ಪ್ರಯತ್ನಕ್ಕೆ ಶುಭಕೋರಿ ಇಂಗ್ಲಿಷ್ ಪತ್ರಿಕೆಗಳೂ ಸೇರಿದಂತೆ ಎಲ್ಲರೂ ಪ್ರೋತ್ಸಾಹದಾಯಕವಾಗಿ ವಿಮರ್ಶೆ ಬರೆದಿದ್ದಾರೆ. ಆದರೂ ಕೂಡ ಬಿದುಗಯಾದ 3ನೇ ದಿನ ತ್ರಿಭುವನ್ ನಲ್ಲಿ ಕೇವಲ ಹತ್ತು ಜನರ ಮಧ್ಯ ಕುಳಿತು ಚಿತ್ರ ನೋಡಿದಾಗ ... ಕೆ ಮಂಜುರಂತಹ ಉದಾರಿ ನಿರ್ಪಾಕರ ಬಗ್ಗೆ ಮೆಚ್ಚುಗೆ ಮೂಡುತ್ತದೆ ಮತ್ತು ಅಭಯಸಿಂಹರ ಮೇಲಿನ ನಿರೀಕ್ಷೆ ಇನ್ನೂ ಹೆಚ್ಚಾಗುತ್ತದೆ. ಚಿತ್ರದಲ್ಲಿ ಅದಕ್ಕೆ ಉತ್ತಮ ಕಾರಣಗಳಿವೆ. 

ಚಿತ್ರ ಉತ್ತಮವಾಗಿದ್ದರೂ, ನಿರ್ದೇಶಕ ನಿರ್ಮಾಪಕರ ಬಗ್ಗೆ ಮನಸಿನಲ್ಲಿ ಮೆಚ್ಚುಗೆ ಮೂಡಿದರೂ ಕೂಡ ಮಾರ್ಕೆಟ್ ನಲ್ಲಿ ಚಿತ್ರ ಪಿಕ್ ಅಪ್ ಆಗುತ್ತದೆ ಅನಿಸುವುದಿಲ್ಲ. ಒಂದಷ್ಟು ಪ್ರೇಕ್ಷಕರನ್ನು ಥೇಟರ್ ಗೆ ಎಳೆದು ತರಬಹುದಾಗಿದ್ದ ಆದಿತ್ಯ ಈ ಚಿತ್ರದಲ್ಲಿ ಇದ್ದರೂ ಕೂಡ ಅವರನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಇಂತಹ ಅನೇಕ ಮಾರ್ಕೆಟಿಂಗ್ ಮಿಸ್ಟೇಕ್ ಗಳು ಚಿತ್ರದ ಸೋಲಿಗೆ ಕಾರಣವಾಗಲಿವೆ. ಬಹುಶಃ ಈ ಚಿತ್ರದ ಬಿಡುಗಡೆಯ ಬಗ್ಗೆ ಯಾರಿಗೂ ಆಸಕ್ತಿ ಇದ್ದಂತಿರಲಿಲ್ಲ.. ಬಹಳ ಹಿಂದೆಯೇ ಅಭಯಸಿಂಹ ಚಿತ್ರ ಮುಗಿಸಿಕೊಟ್ಟಿದ್ದರು ಅನಿಸುತ್ತದೆ 

ಒಬ್ಬ ಉದಾರಿ ನಿರ್ಮಾಪಕನ ಕೊಡುಗೆಯಾದ, ಅದ್ಭುತ ಚಿತ್ರವಾಗುವ ಎಲ್ಲ ಸಂಭಾವ್ಯತೆಗಳನ್ನೂ ಹೊಂದಿರುವ ಶಿಕಾರಿ ಉತ್ಸಾಹಿ ನಿರ್ದೇಶಕನ ಅನುಭವದ ಕೊರತೆಯಿಂದ ಹಾಗೂ ಕೆಟ್ಟ ಮಾರ್ಕೆಟಿಂಗ್ ನಿಂದ ಅನೇಕರಿಗೆ ನಷ್ಟವನ್ನು ಉಂಟು ಮಾಡಲಿದೆ. ಚಿತ್ರರಂಗಕ್ಕೆ ಮತ್ತು ಪ್ರೇಕ್ಷಕರಿಗೂ ಕೂಡ.

No comments:

Post a Comment