Saturday, June 23, 2012

ಗಂದಾ ಹೈ, ಮಗರ್ ಧಂದಾ ಹೈ



ಡರ್ಟಿ ಪಿಕ್ಚರ್ ಚಿತ್ರದ ಬಗ್ಗೆ ಬಹಳ ಕೇಳಿದ್ದೆ....ವಿದ್ಯಾ ಬಾಲನ್ ಉತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಾಗಲಂತೂ ಚಿತ್ರ ನೋಡಲೇಬೇಕೆಂದುಕೊಂಡೆ... ನೆನ್ನೆ ರಾತ್ರಿ ಎಲ್ಲ ಕೆಲಸ ಬದಿಗೊತ್ತಿ ನಿದ್ದೆ ಹಾಳು ಮಾಡಿಕೊಂಡು ಚಿತ್ರ ನೋಡಲು ಕುಳಿತೆ... ನೋಡಿದ ಮೇಲೆ ಅನಿಸಿದ್ದಿಷ್ಟೇ....''21 ನೆ ಶತಮಾನದ ಈ ಮುಂಬಾಗಿಲಿನಲ್ಲಿ ಮಾರಾಟ ಮಾಡುವ ಕಲೆಯನ್ನು ಬಲ್ಲವನೇ ರಾಜ...ಗೆದ್ದೊನೇ ಬಾಸು ... ಹೇಗೆ ಗೆದ್ದೇ ಅನ್ನುವುದು ಮುಖ್ಯ ಅಲ್ಲ..''


ಡರ್ಟಿ ಪಿಕ್ಚರ್ ಚಿತ್ರದಲ್ಲಿ ಸಿಲ್ಕ್ ಸ್ಮಿತಾಳ ಜೀವನದ ಸತ್ಯ ಕಥೆ ಇದೆ...ಎಂದು ಬಿಂಬಿಸಿ ಪ್ರಚಾರ ಪಡೆಯಲಾಯಿತು,.. ಆ ಹೆಸರು ಸಮಸ್ಯೆ ತರುತ್ತೆ ಅಂತ ಗೊತ್ತಾದಾಗ... ನಮ್ಮ ಚಿತ್ರದಲ್ಲಿ ಅವಳ ಕಥೆ ಇಲ್ಲ.. ಇದು ಬರೀ ಕಾಲ್ಪನಿಕ ಅಂತ ತಿಪ್ಪೆ ಸಾರಿಸಲಾಯಿತು... ಅನಾವಶ್ಯಕವಾಗಿ... ಸಿಲ್ ಸ್ಮಿತಾ ಹೆಸರು ಹೇಳಿಕೊಂಡು ಪ್ರಚಾರ ಪಡೆದ ಈ ಸಿನೆಮಾದ ಮಾಸ್ಟರ್ ಮೈಂಡ್ ಏಕ್ತಾ ಕಪೂರ್... ತಾನು ಒಬ್ಬ ಯಾವುದೇ ಮುಲಾಜು...ಮೌಲ್ಯ...ನಾಚಿಕೆ ಇಲ್ಲದ ವ್ಯಾಪಾರಸ್ಥಳು ಎಂಬುದನ್ನು ಇನ್ನೊಮ್ಮೆ ಸಾಬೀತು ಮಾಡಿದ್ದಾಳೆ. ಕಾಲ್ಪನಿಕ ಅಂತ ಹೇಳಿಕೊಂಡರೂ ಅನಾವಶ್ಯಕವಾಗಿ ಸಿಲ್ಕ್ ಎನ್ನುವ ಹೆಸರನ್ನು ಚಿತ್ರದಲ್ಲಿ ಪಾತ್ರಕ್ಕೆ ಇಡಲಾಗಿದೆ... ವಾಸ್ತವವಾಗಿ ಆಂಧ್ರ ಪ್ರದೇಶದ ರಜಮಂದ್ರಿ ಬಳಿಯ ಹಳ್ಳಿಯ ಹುಡುಗಿಯಾದ ಸಿಲ್ಕ್ ಸ್ಮಿತಾಳನ್ನು ಒಬ್ಬ ತಮಿಳು ಹುಡುಗಿ ಎಂದು ತೋರಿಸಲಾಗಿದೆ... ಕಥೆಯಲ್ಲಿ ಅವಳ ಜೀವನದ ಏಳು- ಬೀಳು... ಯಾವುದನ್ನೂ ಸರಿಯಾಗಿ ದಾಖಲಿಸಿಲ್ಲ... ಸಿಲ್ಕ್ ತಮಿಳಿಗಿಂತ ತೆಲುಗು ಚಿತ್ರಗಳಲ್ಲಿ ಅತಿ ಹೆಚ್ಚು ಕಾಣಿಸಿಕೊಂಡಳು.... ಅನೇಕ ಉತ್ತಮ ಪಾತ್ರಗಳನ್ನೂ ಕೂಡ ಮಾಡಿದ್ದಳು...ಚಿರಂಜೀವಿಯಂತಹ ನಟ ಸಹ ಸಿಲ್ಕ್ ಅಭಿನಯವನ್ನು ಮೆಚ್ಚಿ ಉತ್ತಮ ಪಾತ್ರ ಕೊಡಿಸಿದ್ದ...ಅವಳು ಹಿಂದಿ ಚಿತ್ರಗಳಲ್ಲಿಯೂ ಕುಣಿದಿದ್ದಾಳೆ...ಒಟ್ಟು ಎಂಟು ಭಾಷೆಗಳಲ್ಲಿ ಮುನ್ನೂರ ಐವತ್ತು ಚಿತ್ರಗಳಲ್ಲಿ ನಟಿಸಿದ್ದಾಳೆ ಕುಣಿದಿದ್ದಾಳೆ... ಇದ್ಯಾವುದರ ಬಗ್ಗೆಯೂ ಚಿತ್ರದಲ್ಲಿಲ್ಲ..ಅವಳನ್ನು ಮತ್ತು ಅವಳ ದುಡ್ಡನ್ನು ಅನೇಕರು ಕಿತ್ತು ತಿಂದರು.. ಅವಳಿಗೆ ಉತ್ತಮ ಸ್ನೇಹಿತೆಯರಂಥ ಸಹಾಯಕಿಯರು ಇದ್ದರು..ಮನೆ ಕೆಲಸದವರು ಇದ್ದರು..ಆದರೆ ಇದ್ಯಾವುದೂ ಚಿತ್ರದಲ್ಲಿಲ್ಲ. ಕೇವಲ ನಾಲ್ಕೈದು ಪಾತ್ರಗಳ ನಡುವೆಯೇ ಕಥೆ ಮುಗಿದು ಹೋಗುತ್ತದೆ.....ನಿಜವಾಗಿಯೂ ಸಿಲ್ಕ್ ಸ್ಮಿತಾಳ ಜೀವನ ಒಬ್ಬ ಉತ್ತಮ ನಿರ್ದೇಶಕನ ಕೈಗೆ ಸಿಕ್ಕಿದ್ದರೆ ಅದ್ಭುತ ಚಿತ್ರವಾಗಬಹುದಾಗಿತ್ತು... ಆದರೆ ಮಿಲನ್ ಲೂಥರಿಯ....ಬರೀ ಗಿಮಿಕ್ ರಾಜ....ಅವರ ಹಿಂದಿನ ಚಿತ್ರ..ಒನ್ಸ್ ಅಪಾನ್ ಅ ಟೈಮ್ ಇನ್ ಮುಂಬೈ ಚಿತ್ರ ಕೂಡ....ವಾಸ್ತವಕ್ಕೆ ದೂರವಾಗಿದ್ದರೂ...ಮುಂಬೈ ಭೂಗತ ದೊರೆಗಳ ಕಥೆ ಎನ್ನುವ ಗಿಮಿಕ್ ಮಾಡಿ...ದುಡ್ಡು ಬಾಚಿದ್ದರು... ಇಲ್ಲಿ ಸಿಲ್ಕ್ ಸ್ಮಿತಾಳ ಕಥೆಯೂ ಪೂರ್ಣವಾಗಿ ಹೇಳಿಲ್ಲ...ಮತ್ತು ಇವರು ಕಾಲ್ಪನಿಕ ಎಂದು ಹೇಳಿಕೊಳ್ಳುವ ಕಥೆಗೂ ತಲೆ ಬುಡ.. ಇಲ್ಲ... ಆದರೆ ವಿದ್ಯಾ ಬಾಲನ್ ನಂತಹ ಮಡಿವಂತ ನಟಿಯ ಬಟ್ಟೆ ಬಿಚ್ಚಿಸಿ ಅದನ್ನೇ ತಮ್ಮ ಪ್ರಚಾರದ ತಿರುಳನ್ನಾಗಿಸಿ... ಸಿಲ್ಕ್ ಹೆಸರು ಉಪಯೋಗಿಸಿ.... ಹೆಸರು ದುಡ್ಡು ಎಲ್ಲ ಬಾಚಿದರು.... ಈ ಚಿತ್ರದಲ್ಲಿ ಒಂದು ಡೈಲಾಗ್ ಇದೆ...''ಸಭ್ಯರ ಮರ್ಯಾದೆ ಬೀದಿ ಪಾಲಾದರೆ ಜಾಸ್ತಿ ಸಂತೋಷ ಪಡುವವರು ಉಳಿದ ಸಭ್ಯರೇ'' ಆ ಮಾತು ಅಕ್ಷರಶಃ ಸತ್ಯ.. ಯಾಕೆಂದರೆ.. ಎಷ್ಟೋ ಜನ ಬಿಚ್ಚಮ್ಮಗಳು ಪ್ರಪಂಚದಲ್ಲಿ ಇದ್ದರೂ..ವಿದ್ಯಾ ಬಾಲನ್ ಬಟ್ಟೆ ಬಿಚ್ಚಿದ್ದಾಳೆ ಎನ್ನುವ ಕಾರಣಕ್ಕೆ ಅದನ್ನು ನೋಡಿದ ನಮ್ಮ ಭಾರತದ ಸಭ್ಯಸ್ಥರು ಅದನ್ನು ಸೂಪರ್ ಹಿಟ್ ಚಿತ್ರವನ್ನಾಗಿಸಿದ್ದಾರೆ..
ಒಟ್ಟಿನಲ್ಲಿ ಮಾರ್ಕೆಟಿಂಗ್ ತಿಳಿದ ಏಕ್ತಾ ಕಪೂರ್... ದುಡ್ಡು ಬಾಚಿದರೆ.. ವಿದ್ಯಾ ಪ್ರಶಸ್ತಿ ಪಡೆದಿದ್ದಾಳೆ... ಅನಗತ್ಯವಾಗಿ ಸಿಲ್ಕ್ ಎಂಬ ಹೆಣ್ಣು ಮಗಳ ಹೆಸರಿಗೆ ಮಸಿ ಬಡಿದಿದ್ದಾರೆ.. ಪ್ರಶ್ನಿಸುವ ಸೌಜನ್ಯ ಸಮಯ... ನಮ್ಮ ಭಾರತದ ಬುದ್ದಿ ಜೀವಿಗಳಿಗೆ ಇಲ್ಲ...
 

ಹುಸಿಯಾದವೋ ಎಲ್ಲ ಹುಸಿಯಾದವೋ


ಆರ್ಥಿಕವಾಗಿ ಹೆಚ್ಚಾದ ಕನ್ನಡ ಚಿತ್ರಗಳ ವ್ಯಾಪ್ತಿ, ಲಾಭದ ಮೊತ್ತ, ಹೊಸ ನಟರ ದಂಡು ಇದೆಲ್ಲ ನೋಡಿದರೆ ನಮ್ಮ ಚಿತ್ರರಂಗ ಬೆಳೆಯುತ್ತಿದೆ ಅನ್ನಿಸೋದು ನಿಜ. ಆದರೆ ನಾವು ಹೆಮ್ಮೆ ಪಡುವಂಥ ಅಥವಾ ನಮ್ಮನ್ನು ಬೆಳೆಸುವಂಥ ಕನ್ನಡ ಸಿನೆಮಾಗಳು ಎಷ್ಟು ಬಂದಿವೆ?
ದೊಡ್ಡ ನಟರಾದ ವಿಷ್ಣು ಕೊನೆಯ ಕೆಲ ವರ್ಷಗಳಲ್ಲಿ ಕಲಾಸಾಮ್ರಾಟ್, ಹುಲಿ, ಸಿಂಹ ಮುಂತಾದ ಪ್ರಾಣಿಗಳ ಸಹವಾಸಕ್ಕೆ ಬಿದ್ದು ನಮ್ಮ ಕನ್ನಡ ಸಿನೆಮಾ, ವಿಷ್ಣು ಸರ್ ಸಿನೆಮಾ ಅಂತ ಹೇಳಿಕೊಂಡು ಖುಷಿ ಪಡುವಂಥದ್ದು ಏನೂ ಮಾಡಲಿಲ್ಲ.  ಅವರು ವೈಯಕ್ತಿಕವಾಗಿ, ಆಧ್ಯಾತ್ಮಿಕವಾಗಿ ಎಷ್ಟು ಪಕ್ವವಾಗುತ್ತಾ ಬಂದರೂ, ಅವರ  ಚಿತ್ರಗಳು ಅಷ್ಟೇ ಕಳಪೆಯಾಗುತ್ತ ಹೋದವು. ಸುದೀಪರ 'ದರ್ಶನ' ಆದಾಗ  ಇವೆಲ್ಲ  ಕೇವಲ ಮಾರುಕಟ್ಟೆಯ  ಅನಿವಾರ್ಯತೆಗಳು ಹುಟ್ಟುಹಾಕಿದ ಹೊಸಮುಖಗಳು ಅಂದುಕೊಳ್ಳುವಾಗಲೇ, ಮೈ ಆಟೋಗ್ರಾಫ್ ನಂಥ ಒಳ್ಳೆ ರಿಮೇಕ್ ಮಾಡಿ, ರಾಮ್ ಗೋಪಾಲ್ ವರ್ಮರಂಥವರ ಸಹವಾಸ ಬೆಳಸಿಕೊಂಡ ಮೇಲೆ, ಅಲ್ಲಿ-ಇಲ್ಲಿ ಕಲಿತದ್ದನ್ನೆಲ್ಲ ಸೇರಿಸಿ ಸುದೀಪ್ ಏನೋ ಮಾಡ್ತಾರೆ ಅಂತ ಕಾದದ್ದೇ ಬಂತು. ಸ್ನೇಹಿತನಿಗಾಗಿ ರಿಮೇಕು, ಸ್ವಮೇಕಿನ ಲಾಸಿಗೆ ಮತ್ತೆ ರಿಮೇಕು, ಕ್ರಿಕೆಟ್ಟು, ಜಗಳ, ಕಿರಿಕ್ಕು ಇದೆಲ್ಲದರ ಮೂಲಕ ತಮ್ಮ ಎನೆರ್ಜಿ ಕಳೆದುಕೊಳ್ಳುತ್ತಿರುವ ಸುದೀಪ್ ಹೊಸ ದೀಪ ಬೆಳಗ್ತಾರೆ ಅಂದುಕೊಳ್ಳೋದು ಮೂರ್ಖತನ. ದರ್ಶನ್ ಇಂಥದ್ದೆನಾದ್ರೂ ಮಾಡ್ತೀನಿ ಅಂತ ಯಾವತ್ತೂ ಸೂಚನೆ ಕೊಟ್ಟಿಲ್ಲ.  ರಿಯಲ್ ಎಸ್ಟೇಟ್ ನಿಂದ ಬಂದ ಅರ್ಥಿಕ ಬದಲಾವಣೆ ಕನ್ನಡ ಚಿತ್ರರಂಗದಲ್ಲಿ ಅನೇಕ ಅಬ್ಬೆಪಾರಿಗಳನ್ನು ನಿರ್ದೇಶಕರನ್ನಾಗಿ ನಟರನ್ನಾಗಿ ಮಾಡಿತು. ಮಳೆ ಜೋರಾಗಿ ಬಂದಾಗ ಉಂಟಾಗುವ ಪ್ರವಾಹದಲ್ಲಿ ಉಪಯೋಗಿಯಾದ  ನೀರಿನ ಜೊತೆ ಕಸ ಕಡ್ಡಿ ಮಣ್ಣು ಮಸಿ ಕೂಡ ಸೇರಿಕೊಂಡಿರುತ್ತೆ.  ಕೆಲದಿನಗಳ ನಂತರ ಎಲ್ಲ ತಿಳಿಯಾಗುತ್ತೆ. ಇಲ್ಲಿಯೂ ಹಾಗೆ ಆಯ್ತು.  ಆದರೆ ಕೆಲವರು ಭರವಸೆ ಮೂಡಿಸಿದ್ದರು. ದೊಡ್ಡ ಸ್ಟಾರ್ ಆಗುತ್ತಾರೆ ಎಂಬ ಕಲ್ಪನೆಯೂ ಇಲ್ಲದ ಗಣೇಶ್ ಏಕಾ ಏಕಿ ಗೋಲ್ಡನ್ ಸ್ಟಾರ್ ಆಗಿ ಭರವಸೆ ಮೂಡಿಸಿದ್ದರು. ವಿಜಿಯಿಂದ ಮಾರ್ಕೆಟ್ ದುನಿಯಾ ದೊಡ್ಡದಾಯ್ತು. ಆದರೆ ಅದರಾಚೆಗೆ ಎಲ್ಲ ಅಯೋಮಯ. ಧಾರಾವಾಹಿಗೆ ಪಡೆದ ಸಂಭಾವನೆಗೆ ನಟಿಸಿ ಚೆಲುವಿನ ಚಿತ್ತಾರ ಬಿಡಿಸಿದ ಗಣೇಶ್ ಎಷ್ಟೇ ಅಸಮಾಧಾನವಿದ್ದರೂ ಒಂದು ಹಿಟ್ ಗಾಗಿ  ಹಳೆ ಗಂಡನ ಪಾದವೇ ಗತಿ ಅಂತ ಕಲಾಸಾಮ್ರಾಟರಿಗೆ ಸಾಮಂತರಾದದ್ದು ಪತ್ನಿಲೀಲಾವಿನೋದ. ಮಹತ್ತರ ನಿರೀಕ್ಷೆ ಮೂಡಿಸಿದ ಭಟ್ರು ಬೇರೆಯವರ ಚಿತ್ರಕ್ಕೆ ಬರೆದ  ಹಾಡುಗಳಲ್ಲಿ ವಿಭಿನ್ನತೆ ಉಳಿಸಿಕೊಂಡರೂ ತಮ್ಮ ಚಿತ್ರಗಳ ಸಂಭಾಷಣೆಯಲ್ಲಿ, ನಾಯಕ ನಟರ ವಿಷಯದಲ್ಲಿ ಉಡಾಫೆಯಲ್ಲಿ ಏಕತಾನತೆಗೆ  ಅಂಟಿಕೊಂಡು ಸೋತ ಚಿತ್ರಗಳನ್ನೂ ಗೆದ್ದಿವೆ ಅಂತ ಬಿಂಬಿಸುವ ಪ್ರಯತ್ನ ಮಾಡಿ ಸಿನೆಮಾ ಬಗ್ಗೆ ಇಷ್ಟು ಪ್ರೌಢವಾಗಿ ಮಾತನಾಡುವ ಭಟ್ಟರು ಕೂಡ ಸೋಲನ್ನು ಒಪ್ಪಿಕೊಳ್ಳದೆ ಕನ್ನಡಿಗರನ್ನು ಮತ್ತಷ್ಟು ಹತಾಶೆಗೆ ತಳ್ಳಿದ್ದಾರೆ.  ಇಂತಿ ನಿನ್ನ ಪ್ರೀತಿಯ ದಲ್ಲಿ ನಡೆದ ಕೆಲವು ತಪ್ಪುಗಳನ್ನು ಸರಿಪಡಿಸುವ ಬದಲಾಗಿ ಸೂರಿ ಕೂಡ ಸ್ಟಾರ್ ಮಾಯೆಯ ಸೇಫ್ ಜೊನ್ ಗೆ ಹೋಗಿದ್ದಾರೆ. ಇದು ನಮ್ಮ ಕನ್ನಡ ಸಿನೆಮಾ. ನಮ್ಮವರು ಮಾಡಿರೋದು ಅಂತ. ಅಂತ ನಾವು ಪರಭಾಷೆಯ ಸ್ನೇಹಿತರಿಗೆ ಹೆಮ್ಮೆಯಿಂದ ತೋರಿಸುವಂಥ ಸಿನೆಮಾಗಳನ್ನು ಯಾರೂ ಮಾಡುತ್ತಿಲ್ಲ. yeak , ಕನ್ನಡ ಸಿನೆಮಾ ನಾ? ಅಂತ ಮೂಗು ಮುರಿಯುವ ಜನರ ಸಂಖ್ಯೆ ಬೆಳೆಯುತ್ತಿದೆ.ಕನ್ನಡಿಗರಲ್ಲೂ ಕೂಡ. ಇತ್ತೀಚಿಗೆ ಆರಕ್ಷಕ ಚಿತ್ರದ ತುಣುಕು ಟಿವಿಯಲ್ಲಿ ಕಾಣಿಸಿತು. ಅದರಲ್ಲಿ ನಾಯಕ ಪೋಲಿಸ್ ಯುನಿಫಾರ್ಮ್ ಜೊತೆಗೆ, ತಲೆ ಮೇಲೆ ಪೊಲಸ್ ಟೋಪಿ, ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡು ನಾಯಕಿಯ ಜೊತೆ ಹುಲ್ಲುಗಾವಲಿನ ಮೇಲೆ ನೃತ್ಯ ಮಾಡ್ತಾನೆ. ಇಂಥ ದೃಶ್ಯಗಳನ್ನು ತೋರಿಸಿದರೆ ಯಾವ ಸ್ನೇಹಿತರು ನಗದೆ ಇರೋಕೆ ಸಾಧ್ಯ...? ನೃತ್ಯ ಮಾಡುವಾಗ ಪೋಲಿಸ್ ಟೋಪಿ ಕನ್ನಡಕ ಎಷ್ಟು funny ಯಾಗಿ ಕಾಣುತ್ತೆ ಅನ್ನೋ ಅರಿವು ಚಿತ್ರೀಕರಣದಲ್ಲಿ ಯಾರಿಗೋ ಬರೋದೆ ಇಲ್ಲವಾ..?  ವಿಷ್ಣು ಅವರ ಕೋನೆ ಚಿತ್ರದಲ್ಲಿ  "ಚಾಮುಂಡಿ ತಾಯಿ ಆಣೆ" ಹಾಡಿನ ನೃತ್ಯ ಸಂಯೋಜನೆ ನೋಡಿ ಯಾವನಿಗಾದರೂ ಬೇಸರವಾಗದೆ ಇರದು. ಏನಾದ್ರೂ ಕೇಳಿದ್ರೆ ನಮ್ಮಲ್ಲಿ ಕತೆ ಇಲ್ಲ ಸಾರ್ ಅಂತಾರೆ. ತಮಿಳಿನ ಸೂರ್ಯನಿಗೆ ಸಿಗುವ ಹೊಸ ರೀತಿಯ ಕಥೆಗಳು ನಮ್ಮಲ್ಲಿ ಯಾರಿಗೂ ಯಾಕೆ ಸಿಗೋದಿಲ್ಲ.? ಅವರು ಮಾಡಿ ಆದ ಮೇಲೆ ಕಾಪಿ ಹೊಡೆಯೋಕೆ ಮಾತ್ರ ನಮಗೆ ಬರುತ್ತೆ.  ಚಿಕ್ಕ ಬಜೆಟ್ ನಲ್ಲಿ ಚೊಕ್ಕವಾಗಿ ಚಿತ್ರ ಮಾಡಿ ದೊಡ್ಡ ಲಾಭವನ್ನು ಕೊಡಿಸುವ ತಾಕತ್ತು ನಮ್ಮ ನಿರ್ದೇಶಕರುಗಳಿಗೆ ಇಲ್ಲದಾಗಿದೆ. ಅಂತಹ  ನಿರ್ದೆಶರನ್ನು ಗುರಿತಿಸಿ ಅವರಿಗೆ ಅವಕಾಶ ಕೊಡುವ ಸಿನೆಮಾ ಜ್ದ್ನಾನ ಇರುವ ನಿರ್ಮಾಪಕರು ತಮ್ಮ ತಮ್ಮ ವಂಶದ ಕುಡಿಗಳನ್ನು ಸ್ಟಾರ್ ಮಾಡುವಲ್ಲಿ ಬ್ಯುಸಿಯಾಗಿದ್ದರೆ.  ಜ್ದ್ನಾನ ಇಲ್ಲದ ನಿರ್ಮಾಪಕರು ರೀಲು ಸುತ್ತಿಸುತ್ತಿದ್ದಾರೆ. ತೆವಲು ತೀರಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕ ಮಾತ್ರ ಭೇರೆ ಭಾಷೆಯ ಒಳ್ಳೊಳ್ಳೆ ಚಿತ್ರಗಳನ್ನು ಇಂಟರ್ನೆಟ್ ನಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಂಡು ಸುಖವಾಗಿದ್ದಾನೆ. ಕನ್ನಡದವರಿಗೆ ಉಗಿಯುತ್ತಲೇ ಇದಾನೆ.

ಯೋಗರಾಜ್ ಭಟ್ಟರಿಗೊಂದು ಪತ್ರ.

ಭಟ್ಟರಿಗೆ ನಮಸ್ಕಾರ. 
ನಾನೊಬ್ಬ ಸಾಮಾನ್ಯ ಸಿನೆಮಾ ವೀಕ್ಷಕ. ನಿಮ್ಮ ಎಲ್ಲ ಚಿತ್ರಗಳನ್ನು ನೋಡಿದ್ದೇನೆ.  ತಕ್ಕ ಮಟ್ಟಿಗೆ ಇಷ್ಟ ಕೂಡ ಆಗಿದ್ದವು.  ಆದರೆ ನಿಮ್ಮ ಪರಮಾತ್ಮ ಚಿತ್ರವನ್ನು ಮೊದಲ ವಾರವೇ ಹೆಚ್ಚಿನ ದುಡ್ಡು ಕೊಟ್ಟು ನೋಡಲು ಹೋಗಿ ನಿಮ್ಮ ಮೇಲೆ ಅತಿಯಾದ ಸಿಟ್ಟು ಬಂತು. ಯಾಕೆಂದರೆ ಇಡೀ ಚಿತ್ರ ಅಸಹಜವಾಗಿದೆ. ನಿಮ್ಮನ್ನು ತೆಗಳುವ ಉದ್ದೇಶ ನಂಗೆ ಇಲ್ಲ. ಆದರೆ ದುಡ್ಡು ಕೊಟ್ಟು ಚಿತ್ರ ನೋಡುವ ಒಬ್ಬ ಪ್ರೇಕ್ಷಕನಾಗಿ ನನಗೆ ಅನಿಸಿದ್ದನ್ನು ಹೇಳುವ ಹಕ್ಕು ನನಗೆ ಇದೆ. ಆದರೆ ನನ್ನ ಅಭಿಪ್ರಾಯವನ್ನು ನೀವು ಹೇಗೆ ಸ್ವೀಕರಿಸುತ್ತೀರಿ ಅನ್ನೋದು ನಿಮಗೆ ಬಿಟ್ಟದ್ದು.  ಪರಮಾತ್ಮನ ಬಗ್ಗೆ ಆಮೇಲೆ ಹೇಳ್ತೀನಿ. ಅದಕ್ಕಿಂತ ಮುಖ್ಯವಾಗಿ ನಾನು ಈ ಪತ್ರ ಬರೆಯಲು ಕಾರಣ, ನಿಮ್ಮ ಮೇಲೆ ನನಗಿರುವ ಇನ್ನೊಂದು ಬೇಸರ. ಅದೇನೆಂದರೆ...
ನಿಮ್ಮ ಚಿತ್ರಗಳಲ್ಲಿ ಸಂಸ್ಕೃತ ಭಾಷೆಯ ಬಳಕೆ ಮಾಡುವ ಸಂದರ್ಭಗಳಲ್ಲಿ ನೀವು ತೋರುವ ಅಸಡ್ಡೆ.
೧. ಮುಂಗಾರು ಮಳೆ ಚಿತ್ರದಲ್ಲಿ ಮದುವೆ ಮನೆಗೆ ಪುರೋಹಿತರು ಬರುವ ಹಾಸ್ಯ ದೃಶ್ಯದಲ್ಲಿ ಅನಂತ್ ನಾಗ್ ರವರು ನೀವು ಸಂಸ್ಕೃತ ಓದಿದ್ದೀರೋ..? ಅಥವಾ ಇಂಗ್ಲಿಷೋ..? ಎಂದು ಕೇಳಿದಾಗ.. ನಿಮ್ಮದೇ ದ್ವನಿಯಲ್ಲಿ ಹೇಳಿದ ಸಂಭಾಷಣೆ ಇದೆ."ಏನ್ ಸ್ವಾಮೀ, ಚತುರ್ವೇದ ಅಧ್ಯಯನಾನೂ ಆಗಿದೆ, ಸಂಸ್ಕೃತ ಕೂಡ ಆಗಿದೆ." ಅಂತ ಪುರೋಹಿತರು ಹೇಳುತ್ತಾರೆ. ನಾನು ನಿಮ್ಮ ಗಮನಕ್ಕೆ ತರುವ ವಿಷಯ ಏನೆಂದರೆ, ಭಾರತದಲ್ಲಿ ಚತುರ್ವೇದ ಅಧ್ಯಯನ ಮಾಡಿದವರು ಯಾರೂ ಈಗ ಬದುಕಿಲ್ಲ. ಯಾಕೆಂದರೆ ಕೇವಲ ಒಂದು ವೇದ ಪೂರ್ತಿಯಾಗಿ ಅಭ್ಯಾಸ ಮಾಡಲು ಹತ್ತು ವರ್ಷ ಬೇಕು.  ಋಗ್ವೇದದಲ್ಲಿ 114 ಅದ್ಯಾಯಗಳು ಇವೆ. (16000 ಮಂತ್ರಗಳು) ಇನ್ನು ನಾಲ್ಕೂ ವೇದಗಳನ್ನು ಗುರುಕುಲದಲ್ಲಿ ಇದ್ದು ಅಭ್ಯಾಸ ಮಾಡಲು ಕನಿಷ್ಠ 35 ವರ್ಷ ಬೇಕು.  

ಇನ್ನೊಂದು ಮುಖ್ಯ ವಿಷಯ ಏನೆಂದರೆ,
ವೇದ ಓದಿದವರಿಗೆ ಮದುವೆ ಮಾಡಿಸಲು ಬರೋದಿಲ್ಲ. ಸಂಸ್ಕೃತ ಓದಿದವರಿಗೂ ಕೂಡ. 
ಮದುವೆಯಲ್ಲಿ  ವೇದ ಮಂತ್ರಗಳ ಉಪಯೋಗ ಇರಬಹುದು. ಆದರೆ ಮದುವೆ ಮಾಡಿಸಲಿಕ್ಕೆ ಅಪ್ಪನ ಹತ್ತಿರ ಅಥವಾ ಅಜ್ಜನ ಹತ್ತಿರ ಎರಡು ತಿಂಗಳು ಪ್ರಯೋಗ ವಿಧಾನ ಅಭಾಸ ಮಾಡಿದ್ರೆ ಸಾಕು. ಇವತ್ತು ಮದುವೆ ಮಾಡಿಸುವ ಪುರೋಹಿತರಲ್ಲಿ 98 %  ಪುರೋಹಿತರುಗಳಿಗೆ ವೇದ ಗೊತ್ತಿಲ್ಲ. ಸಂಸ್ಕೃತವೂ ಗೊತ್ತಿಲ್ಲ. ವೇದ ವಿದ್ವಾಂಸರುಗಳು ಪೌರೋಹಿತ್ಯ  ಮಾಡೋದೆ ಇಲ್ಲ. ಹೀಗಾಗಿ ಮುಂಗಾರು ಮಳೆಯಲ್ಲಿ ನೀವು ಬರೆದ  "ಏನ್ ಸ್ವಾಮೀ, ಚತುರ್ವೇದ ಅಧ್ಯಯನಾನೂ ಆಗಿದೆ, ಸಂಸ್ಕೃತ ಕೂಡ ಆಗಿದೆ." ಈ ಮಾತು ಅಪಹಾಸ್ಯಕರವಾಗಿದೆ. 
2. ಇನ್ನು ಪಂಚರಂಗಿ ಚಿತ್ರದಲ್ಲಿ ನಾಯಕ ನಾಯಕಿಯನ್ನು ನೋಡಿದಾಗ ಕಾಲಿಗೆ ಬೀಳುವ ದೃಶ್ಯದಲ್ಲಿ "ಓಂ ನಮೋ ದಶ ಗಯತ್ರೀಂ ಜಪ್ತ್ವಾ" ಅಂತ ನಾಯಕ ಹೇಳುತ್ತಾನೆ.  ಆ ವಾಕ್ಯದ ಅರ್ಥ ಆ ದೃಶ್ಯಕ್ಕೆ ಹೊಂದುವುದೇ ಇಲ್ಲ.  ಆ ವಾಕ್ಯದ ಅರ್ಥ ಏನೆಂಬುದು ನಿಮಗೆ ಗೊತ್ತೋ..ಅಥವಾ ಇಲ್ಲವೋ..ಅನ್ನೋದು ನನಗೆ ಗೊತ್ತಿಲ್ಲ. ಆದರೆ ಒಳ್ಳೆಯ ಕನ್ನಡ ಬರೆಯುವ ನೀವು ಈ ರೀತಿಯ ಅಸಂಬದ್ಧವಾದ ಸಾಲುಗಳನ್ನು ಬರೆದದ್ದು ನೋಡಿ ಬೇಸರ ಆಯ್ತು.
ಇನ್ನು ಪರಮಾತ್ಮನ ವಿಷಯಕ್ಕೆ ಬರುವುದಾದರೆ,

"ಪರಮಾತ್ಮ" ಶಬ್ದಕ್ಕೆ  "ಒಳ್ಳೆಯ ಮನಸಿನವನು" ಅಥವಾ ಒಳ್ಳೆಯ ಹೃದಯ ಉಳ್ಳವನು ಅನ್ನೋ ಅರ್ಥ ನಿಮ್ಮ ಚಿತ್ರದಲ್ಲಿ ಧ್ವನಿಸುತ್ತದೆ. ಆದರೆ "ಆತ್ಮ" ಅನ್ನೋ ಶಬ್ದಕ್ಕೆ ಇರುವ ನಿಜವಾದ ಅರ್ಥ ಮನಸು-ಹೃದಯ ಈ ಎರಡೂ ಅಲ್ಲ ."ಪರಮ" ಅಂದರೆ "ಒಳ್ಳೆಯ" ಅಂತ ನಿಮಗೆ ಯಾರು ಹೇಳಿದರೋ ಗೊತ್ತಿಲ್ಲ. ಪರಮ+ ಆತ್ಮ  ಈ ಎರಡೂ ಶಬ್ದಗಳು ಸಂಸ್ಕೃತ ಭಾಷೆಯವು. ಅವುಗಳನ್ನು ಯಥಾವತ್ತಾಗಿ ಕನ್ನಡದಲ್ಲಿ ಕೂಡ ಉಪಯೋಗಿಸಲಾಗುತ್ತೆ. ಅವುಗಳ ಅರ್ಥ ಕನ್ನದಲ್ಲಿಯೂ ಕೂಡ ಬದಲಾಗುವುದಿಲ್ಲ.
ಸಾಲು ಸಾಲಾಗಿ ಬಂದ ರಜಾ ದಿನಗಳು, ಪುನೀತ್ ತಾರಾಮೌಲ್ಯ, ನಿಮ್ಮ ಚಿತ್ರದ ಬಗೆಗಿನ ನಿರೀಕ್ಷೆ, ಹರಿಕೃಷ್ಣರ ಸಂಗೀತ ಇವೆಲ್ಲ ಸೇರಿ ಚಿತ್ರದ ಗಳಿಕೆ ಮೊದಲ ವಾರವೇ ದಾಖಲೆ ಮೊತ್ತ ಮೀರಿದ್ದು ಸಹಜ. ಆದರೆ ಚಿತ್ರ ನೋಡಿದ ಪ್ರೇಕ್ಷಕನಿಗೆ ನಿರಾಸೆ ಖಂಡಿತ ಆಗಿದೆ. ಯಾಕೆಂದರೆ ಚಿತ್ರ ಕಳಪೆಯಾಗಿದೆ. ನೀವು ಒಂದು ಉತ್ತಮ ಭಾವನೆಯನ್ನು ಪ್ರೆಶಕನ ಮನಸಿಗೆ ದಾಟಿಸಲು ಪ್ರಯತ್ನಿಸಿರಬಹುದು. ಆದರೆ ಚಿತ್ರದ ಅನೇಕ ಸಂದರ್ಭಗಳಲ್ಲಿ 'ಅಸಹಜತೆ' ಇರುವುದರಿಂದ ಹೀಗಾಗಿದೆ.

ಉದಾಹರಣೆ. 1 , ಬಹಳ ಕ್ರಿಯಶೀಲನಾದ ನಾಯಕ ಯಾವುದೇ ವಿಶೇಷ ಕಾರಣಗಳಿಲ್ಲದೆ, ನಾಯಕಿಯನ್ನು ತೀವ್ರವಾಗಿ ಪ್ರೀತಿಸುತ್ತಾನೆ. ನಾಯಕಿ ಕೂಡ ನಾಯಕನ ಗುಣ-ದೋಷಗಳನ್ನು ನೋಡದೆ ವಿನಾ ಕಾರಣ ಪ್ರೆಮಿಸುತ್ತಾಳೆ.

ಉದಾಹರಣೆ 2 , ಗನ್ನುಗಳನ್ನು ಹಿಡಿದು ಭಯಾನಕ ಸಹಾಯಕರನ್ನು ಇಟ್ಟುಕೊಂಡ ನಾಯಕಿಯ ಅಜ್ಜ, ಮೊಮ್ಮಗಳು ರಾತ್ರಿ ಮನೆಗೆ ಬಾರದೇ ಹೋದರೂ  ನಾಯಕನ ಜೊತೆ jolly ride ಮಾಡುತ್ತಿದ್ದಾಗಲೂ ಕೂಡ ಹುಡುಕಾಡುವ ಪ್ರಯತ್ನ ಮಾಡುವುದಿಲ್ಲ, ಮತ್ತು ಮಾರನೆಯ ದಿನ ಬೆಳಿಗ್ಗೆ ನಿಶ್ಚಿಂತೆಯಿಂದ ಕಂಬಳ ನೋಡಲು ಹೋಗುತ್ತಾನೆ.

ಉದಾಹರಣೆ 3 . ನಾಯಕನ ಸ್ನೇಹಿತ ಸ್ನೇಹಿತೆಯರು ಅವನನ್ನು ಹುಡುಕಿಕೊಂಡು ಹಳ್ಳಿಗೆ ಬಂದಾಗ ನಾಯಕ ಅಸಹಜವಾಗಿ ಅವರನ್ನು ರಸ್ತೆಯಲ್ಲಿ ಬಿಟ್ಟು ತನ್ನ ಹುಡುಗಿಯನ್ನು ಕರೆದುಕೊಂಡು ಮನೆಗೆ ಹೋರಟು ಹೋಗುತ್ತಾನೆ. ಅವನು ಕರೆಯದೆ ಹೋದರೂ ಕೂಡ ಅವನ ಸ್ನೇಹಿತರು ಹಿಂಬಾಲಿಸಿಕೊಂಡು ಹೋಗುತ್ತಾರೆ. ಆಶ್ಚರ್ಯವೆಂದರೆ ಅಲ್ಲಿ ಎಲ್ಲರೂ ಸೇರಿ ಹಾಡಿನಲ್ಲಿ ಡಾನ್ಸ್ ಮಾಡುತ್ತಾರೆ.

 ನಾಯಕನ ಆಧ್ಯಾತ್ಮದ ಹುಡುಕಾಟ- ಪರ್ವತಾರೋಹಣ ಮುಂತಾದವುಗಳು ನಿಷ್ಪ್ರಯೋಜಕ. ಹಾಗೂ ನಾಯಕಿಯನ್ನು ನಾಯಕ ಎತ್ತಿಕೊಂಡು ಹೋಗುವ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳ ಅತಿಯಾದ ಕುಹಕ-ವ್ಯಂಗ್ಯ ಸಾಮಾನ್ಯ ಪ್ರೇಕ್ಷಕನಿಗೂ ಬೇಸರ ತರಿಸುತ್ತದೆ.
ಇನ್ನೂ ಅನೇಕ ಕಾರಣಗಳು ಈ ಚಿತ್ರದ ಬಗ್ಗೆ ಬೇಸರ ಮೂಡಲು  ಕಾರಣವಾಗಿವೆ.

ಉಳಿದಂತೆ ಮೊನ್ನೆ ಜನಶ್ರೀ ವಾಹಿನಿಯಲ್ಲಿ ಬಿ. ಸುರೇಶ -ಶೈಲಜಾ ನಾಗ್ ಅವರ ಜೊತೆಯಲ್ಲಿ ನಿಮ್ಮನ್ನು ನೋಡಿದೆ. ನಿಮ್ಮ ಮಾತುಗಳನ್ನು ಕೇಳುವುದೇ ಒಂದು ಹಬ್ಬ. ನಿಮ್ಮ ಮುಂದಿನ ಚಿತ್ರಕ್ಕೆ ಕಾಯುತ್ತೇನೆ. ಹಣ ಕೊಟ್ಟು ಚಿತ್ರ ಮಂದಿರದಲ್ಲಿಯೇ ನೋಡುತ್ತೇನೆ. ಇನ್ನೊಮ್ಮೆ ನಿರಾಸೆ ಮಾಡಬೇಡಿ.
ನನ್ನ ಯಾವುದೇ ಮಾತಿಗೂ ನಿಮ್ಮನ್ನು ನೋಯಿಸುವ ಉದ್ದೇಶ ಇಲ್ಲ. ತಪ್ಪಾಗಿದ್ದರೆ ಕ್ಷಮಿಸಿ.
ನಿಮ್ಮ ಹುಡುಗ
ದತ್ತರಾಜ್ 
(ಈ ಪತ್ರವನ್ನು ಅವರಿಗೆ ಕಳಿಸಿದ್ದೆ. ಯಾವುದೇ ಉತ್ತರವಿಲ್ಲ. ಆದ್ದರಿಂದ ಇಲ್ಲಿ ಹಾಕಿದ್ದೇನೆ)

"ಶಿಕಾರಿ" ಯನ್ನು ಹತ್ತಿರದಿಂದ ನೋಡಿದಾಗ


ಒಳ್ಳೆ ಚಿತ್ರಗಳು ಬರುವುದಿಲ್ಲ ಎಂದು ಬೊಬ್ಬೆ ಹೊಡೆಯುವ ಕನ್ನಡದ ಸದಭಿರುಚಿಯ ಪ್ರೇಕ್ಷಕರ ಮನಸಿನಲ್ಲಿ ಆಸೆಯನ್ನು ಹುಟ್ಟಿಸಿ ಮತ್ತು ಅವರ ಸಹನೆ ಪರೀಕ್ಷಿಸಿ, ಪರೀಕ್ಷೆಗಳು, ಮತ್ತು IPL ಶುರುವಾಗುವ ಯಡವಟ್ಟು ವೇಳೆಯಲ್ಲಿ ತಕ್ಕ ಪ್ರಚಾರವಿಲ್ಲದೆ ತ್ರಿಭುವನ್ ನಲ್ಲಿ ಶಿಕಾರಿಯನ್ನು ತೋರಿಸಿದ ಮಂಜು ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳುತ್ತಾರೆ. ಅದ್ಭುತ ತಾಂತ್ರಿಕತೆಯಿಂದ ಕೂಡಿದ ..., ಖಂಡಿತವಾಗಿಯೂ ಹೊಸದು ಎಂದು ಹೇಳಬಹುದಾದ ಕಥೆಯುಳ್ಳ..ಮಮ್ಮುಟ್ಟಿ ಯಂತಹ ಸ್ಟಾರ್ ನಟಿಸಿದ ಚಿತ್ರವನ್ನು ಬಿಡುಗಡೆ ಮಾಡುವಲ್ಲಿ ಮಂಜು ತೋರಿರುವ ನಿರುತ್ಸಾಹ ಆಶ್ಚರ್ಯಕ್ಕೆ ಮೊದಲ ಕಾರಣ. ಕನ್ನದಲ್ಲಿ ಮಾರ್ಕೆಟ್ ಇಲ್ಲದೇ ಹೋದರೂ ಕೂಡ ದುಬಾರಿ ಬೆಲೆ ತೆತ್ತು ಮಮ್ಮುಟ್ಟಿಯವರನ್ನು ಈ ಚಿತ್ರಕ್ಕೆ ಕರೆತಂದದ್ದು ಎರಡನೇ ಕಾರಣ ಮತ್ತು ಅಭಯಸಿಂಹರ ಮೇಲೆ ನಂಬಿಕೆ ಇಟ್ಟು ಇಂತಹ ಚಿತ್ರಕ್ಕೆ ಕೆ. ಮಂಜು ಹಣ ಹಾಕಲು ಮನಸು ಮಾಡಿದ್ದು ಆಶ್ಚರ್ಯದ ಇನ್ನೊಂದು ಕಾರಣ. 

ಎರಡು ವರ್ಷಗಳ ಹಿಂದೆ ಅಭಯಸಿಂಹ ಶಿಕಾರಿ ಹೊರಟಾಗ ಆಶ್ಚರ್ಯವಾದದ್ದು ನಿಜ. ಏಕೆಂದರೆ ಒಮ್ಮೆಲೇ ಕೆ. ಮಂಜು ಮತ್ತು ಮಮ್ಮುಟ್ಟಿ ಯಂತಹ ಘಟಾನುಘಟಿಗಳ ಜೊತೆ ಹೆಗಲು ತಾಕಿಸಿ ಹೊರಟಿದ್ದರು. ಪುಣೆಯಲ್ಲಿ ಸಿನೆಮಾ ಅಧ್ಯನ ಮಾಡಿರುವ, ಆದರೆ ಇನೂ ಅನುಭವದಿಂದ ಪಳಗದ ಸಿಂಹ ಶಿಕಾರಿಯ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಜವಾಬ್ದಾರಿಗಳನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ. ಅವರು ಬರೆದ ಕಥೆ ಅದ್ಭುತವಾಗಿದ್ದರೂ, ಆ ಕಥೆಯನ್ನು ಸಮರ್ಪಕವಾಗಿ ತೆರೆ ಮೇಲೆ ತರುವಲ್ಲಿ ಎಡವಿದ್ದಾರೆ. ಪಳಗಿದವರಿಂದ ಸಂಭಾಷಣೆ ಬರೆಸಿದ್ದರೆ ಚಿತ್ರ ಇನ್ನೂ ಸ್ವಲ್ಪ ಚುರುಕು ಪಡೆಯುತ್ತಿತ್ತು. ಚಿತ್ರದಲ್ಲಿನ ಗ್ರಾಂಥಿಕ ಭಾಷೆ ಸಹನೆ ಪರೀಕ್ಷಿಸಿದರೆ, ನಾಯಕ ಮತ್ತು ನಾಯಕಿಯ ನಡುವಿನ ಸಂಭಾಷಣೆಯ ವೇಳೆ ಒಮ್ಮೆ ಬಹುವಚನ, ಒಮ್ಮೆ ಏಕವಚನ, ಮತ್ತೆ ಬಹುವಚನದ ಸಂಬೋಧನೆ ಗೊಂದಲಕ್ಕೀಡು ಮಾಡುತ್ತದೆ. ಅವರಿಬ್ಬರಲ್ಲಿ ಏಕವಚನದ ಸಂಬೋಧನೆಗಿಳಿಯುವಂಥ ಯಾವ ಆಪ್ತ ಸನ್ನಿವೇಶವೂ ಬರುದಿಲ್ಲ. ನಾಯಕನ್ನು ನೀನು ಎಂದು ಸಲಿಗೆಯಿಂದ ಕರೆಯುವ ನಾಯಕಿ ಒಮ್ಮೆಲೇ ಮತ್ತೆ ಬಹುವಚನಕ್ಕೆ ಹಾರಿದಾಗ ಪ್ರೇಕ್ಷಕ ಕುರ್ಚಿಯಲ್ಲೇ ಹಾರುತ್ತಾನೆ. ಡಬ್ಬಿಂಗ್ ನಲ್ಲಿ ಇದೆಲ್ಲವನ್ನೂ ಸರಿಪಡಿಸಬಹುದಿತ್ತು. ಚಿತ್ರದಲ್ಲಿ ಗುಜರಾತಿ ಎಸ್ಟೇಟ್ ಬ್ರೋಕರ್ ನ ಪಾತ್ರಕ್ಕೆ ಮಿಮಿಕ್ರಿ ದಯಾನಂದ್ ಅವರಿಂದ ಮಾಡಿಸಿದ ಡಬ್ಬಿಂಗ್ ಘೋರವಾಗಿದೆ. ಮಮ್ಮುಟ್ಟಿ ದ್ವನಿಯಲ್ಲಿ ಮೂಡಿ ಬಂದ ಕನ್ನಡ ಮತ್ತು ಅಭಯಸಿಂಹರ ವಿಫಲ ಸಂಭಾಷಣೆ ಪ್ರೇಕ್ಷಕ ಕಥೆಯಲ್ಲಿ ಪ್ರವೆಶಿಸಲಿಕ್ಕೆ ಅಡ್ಡಿ ಮಾಡುತ್ತವೆ. ಆದರೆ ಚಿತ್ರದ ವಸ್ತ್ರ ವಿನ್ಯಾಸ, ಛಾಯಾಗ್ರಹಣ, ಪಾತ್ರಗಳ ಆಯ್ಕೆ, ಹಿನ್ನೆಲೆ ಸಂಗೀತ... ಚಿತ್ರೀಕರಣ ತಾಣ...ಮುಂತಾದ ಎಲ್ಲವೂ ಅದ್ಭುತವಾಗಿವೆ. ಪೂನಂ ಬಜ್ವ ಎಂಬ ಪುಣೆಯ ನಟಿ ಚಿತ್ರವನ್ನು ಇನ್ನೂ ಚೆಂದ ಕಾಣುವಂತೆ ಮಾಡಿದ್ದಾಳೆ. ಮಮ್ಮುಟ್ಟಿಗೆ ಅಭಿನಯ ಸರಾಗ. ಆದರೆ ಸಂಭಾಷಣೆ ಕೈ ಕೊಟ್ಟಿರುವುದರಿಂದ ಪ್ರಭಾವ ಬೀರುವುದಿಲ್ಲ. ಶರತ್ ಲೋಹಿತಾಶ್ವ ಪಾತ್ರದ ವಿಕ್ಷಿಪ್ತ ವರ್ತನೆಗೆ ಕೊನೆಗೂ ತಾರ್ಕಿಕ ಕಾರಣ ದೊರೆಯುವುದಿಲ್ಲ. ಗ್ರಾಫಿಕ್ ನಲ್ಲಿ ಮಾಡಿದ ಹುಲಿ ಸಹಜ ಮತ್ತು ಪ್ರಭಾವಶಾಲಿಯಾಗಿ ಕಂಡರೂ ಕೂಡ ಕಥೆಯಲ್ಲಿ ಅದರ ಪ್ರಾಮುಖ್ಯತೆ ಅಚಾನಕ್ಕಾಗಿ ಮಾಯವಾಗುವುದರಿಂದ...ಪ್ರೇಕ್ಷಕ ಹುಲಿಯನ್ನು ಮರೆತೇ ಬಿಡುತ್ತಾನೆ. ಕೇರಳದಲ್ಲಿ ಈ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು ಬಹಳ ಟೀಕೆ ವ್ಯಕ್ತವಾಗಿದೆ ಮತ್ತು ಮಮ್ಮುಟ್ಟಿ ಬಹಳ ಖಾರವಾಗಿ ಎಲ್ಲ ಟೀಕೆ ಗಳಿಗೆ ಪ್ರತಿಕ್ರಯಿಸಿದ್ದಾರೆ. ಕರ್ನಾಟಕದ ಎಲ್ಲ ಪತ್ರಿಕೆಗಳೂ ಇಂತಹ ಉತ್ತಮ ಪ್ರಯತ್ನಕ್ಕೆ ಶುಭಕೋರಿ ಇಂಗ್ಲಿಷ್ ಪತ್ರಿಕೆಗಳೂ ಸೇರಿದಂತೆ ಎಲ್ಲರೂ ಪ್ರೋತ್ಸಾಹದಾಯಕವಾಗಿ ವಿಮರ್ಶೆ ಬರೆದಿದ್ದಾರೆ. ಆದರೂ ಕೂಡ ಬಿದುಗಯಾದ 3ನೇ ದಿನ ತ್ರಿಭುವನ್ ನಲ್ಲಿ ಕೇವಲ ಹತ್ತು ಜನರ ಮಧ್ಯ ಕುಳಿತು ಚಿತ್ರ ನೋಡಿದಾಗ ... ಕೆ ಮಂಜುರಂತಹ ಉದಾರಿ ನಿರ್ಪಾಕರ ಬಗ್ಗೆ ಮೆಚ್ಚುಗೆ ಮೂಡುತ್ತದೆ ಮತ್ತು ಅಭಯಸಿಂಹರ ಮೇಲಿನ ನಿರೀಕ್ಷೆ ಇನ್ನೂ ಹೆಚ್ಚಾಗುತ್ತದೆ. ಚಿತ್ರದಲ್ಲಿ ಅದಕ್ಕೆ ಉತ್ತಮ ಕಾರಣಗಳಿವೆ. 

ಚಿತ್ರ ಉತ್ತಮವಾಗಿದ್ದರೂ, ನಿರ್ದೇಶಕ ನಿರ್ಮಾಪಕರ ಬಗ್ಗೆ ಮನಸಿನಲ್ಲಿ ಮೆಚ್ಚುಗೆ ಮೂಡಿದರೂ ಕೂಡ ಮಾರ್ಕೆಟ್ ನಲ್ಲಿ ಚಿತ್ರ ಪಿಕ್ ಅಪ್ ಆಗುತ್ತದೆ ಅನಿಸುವುದಿಲ್ಲ. ಒಂದಷ್ಟು ಪ್ರೇಕ್ಷಕರನ್ನು ಥೇಟರ್ ಗೆ ಎಳೆದು ತರಬಹುದಾಗಿದ್ದ ಆದಿತ್ಯ ಈ ಚಿತ್ರದಲ್ಲಿ ಇದ್ದರೂ ಕೂಡ ಅವರನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಇಂತಹ ಅನೇಕ ಮಾರ್ಕೆಟಿಂಗ್ ಮಿಸ್ಟೇಕ್ ಗಳು ಚಿತ್ರದ ಸೋಲಿಗೆ ಕಾರಣವಾಗಲಿವೆ. ಬಹುಶಃ ಈ ಚಿತ್ರದ ಬಿಡುಗಡೆಯ ಬಗ್ಗೆ ಯಾರಿಗೂ ಆಸಕ್ತಿ ಇದ್ದಂತಿರಲಿಲ್ಲ.. ಬಹಳ ಹಿಂದೆಯೇ ಅಭಯಸಿಂಹ ಚಿತ್ರ ಮುಗಿಸಿಕೊಟ್ಟಿದ್ದರು ಅನಿಸುತ್ತದೆ 

ಒಬ್ಬ ಉದಾರಿ ನಿರ್ಮಾಪಕನ ಕೊಡುಗೆಯಾದ, ಅದ್ಭುತ ಚಿತ್ರವಾಗುವ ಎಲ್ಲ ಸಂಭಾವ್ಯತೆಗಳನ್ನೂ ಹೊಂದಿರುವ ಶಿಕಾರಿ ಉತ್ಸಾಹಿ ನಿರ್ದೇಶಕನ ಅನುಭವದ ಕೊರತೆಯಿಂದ ಹಾಗೂ ಕೆಟ್ಟ ಮಾರ್ಕೆಟಿಂಗ್ ನಿಂದ ಅನೇಕರಿಗೆ ನಷ್ಟವನ್ನು ಉಂಟು ಮಾಡಲಿದೆ. ಚಿತ್ರರಂಗಕ್ಕೆ ಮತ್ತು ಪ್ರೇಕ್ಷಕರಿಗೂ ಕೂಡ.