Saturday, June 8, 2013

ಸೂರಿಯ ದುನಿಯಾದಲ್ಲಿ

''ದುನಿಯಾ'' ಚಿತ್ರದ ಮೂಲಕ ಬೆಂಗಳೂರಿನಲ್ಲೇ ಇರುವ ಮತ್ತೊಂದು ವಿಕ್ಷಿಪ್ತವಾದ ಲೋಕದ ದರ್ಶನ ಮಾಡಿಸಿ ಸಂಭಾಷಣೆಯ ಮೂಲಕ ಕಚಗುಳಿಯಿಡುತ್ತ ಗಂಭೀರವಾದ ಮಾತುಗಳನ್ನು ಅಷ್ಟೇನೂ ಗಂಭೀರವಲ್ಲದ ಶೈಲಿಯಲ್ಲಿ ಹೇಳುತ್ತಾ ಸೂರಿ ತಮ್ಮ ''ದುನಿಯಾ''  ತೊರಿಸಿದರು. ಅವತ್ತು ಅವರ ಜೊತೆಗಿದ್ದ ಸತ್ಯ ಹೆಗಡೆ ಆ ದುನಿಯಾಗೆ ಕಣ್ಣಾಗಿದ್ದರು. ಅದೇ ಸಮಯದಲ್ಲಿ ಬೀಳುತ್ತಿದ್ದ ಮುಂಗಾರು ಮಳೆಯ ಆರ್ಭಟದಲ್ಲೂ  ಸೂರಿಯ ಸೂಕ್ಷ್ಮತೆಯು ಜನರ ಮನಸು ತಟ್ಟಿದ್ದು ಮತ್ತು ಕಾಡಿದ್ದು ಸಾಮಾನ್ಯ ಸಾಧನೆಯೇನಲ್ಲ. ಅದು ಸೂರಿಯವರ  ತಾಕತ್ತಿಗೆ ಹಿಡಿದ ಕನ್ನಡಿ. ಇಂತಹ ಅಪರೂಪದ ಸೂರಿ ತಮ್ಮನ ಎರಡನೇ ಚಿತ್ರದಲ್ಲಿ ಪ್ರೇಕ್ಷಕರ ನಿರೀಕ್ಷೆಗೆ ಸೊಪ್ಪು ಹಾಕದೇ  ತಮ್ಮನ್ನು ವೈಯಕ್ತಿಕವಾಗಿ ಕಾಡಿದ  self destruction ನ ಕಥೆಯೊಂದನ್ನು ಸುಂದರ ಕಾವ್ಯದಂತೆ ತಮ್ಮೆಲ್ಲ ಕಲಾತ್ಮಕ ತೀವ್ರತೆಯೊಂದಿಗೆ ತೆರೆಯ ಮೇಲೆ ಬರೆದರು. ''ಇಂತಿ ನಿನ್ನ ಪ್ರೀತಿಯ''ಎನ್ನುವ ಆ ದೃಶ್ಯಕಾವ್ಯ ಸಿನೆಮಾದ ವ್ಯಾಪಾರಿಕ ಚೌಕಟ್ಟುಗಳನ್ನು ಮೀರಿತ್ತು, ಮತ್ತು ಸಾಮಾನ್ಯ ಪ್ರೇಕ್ಷಕರಿಗೆ ನಿಲುಕದ ಧ್ವನಿಯೊಂದನ್ನು ಒಡಲಾಳದಲ್ಲಿ ಹೊಂದಿತ್ತು. ಅದರ ವ್ಯಾಪಾರಿಕ ಸೋಲಿನಿಂದ ಬಹುಶಃ ಕಂಗಾಲಾದ ಸೂರಿ, ನಂತರದ ಮೂರೂ  ಚಿತ್ರಗಳಲ್ಲಿ ಸ್ಟಾರ್ ನಿರ್ಮಾಪಕ ಮತ್ತು ಸ್ಟಾರ್ ನಟರನ್ನು ಅವಲಂಬಿಸಿಬಿಟ್ಟರು. ಅತ್ತ ಕಡೆ ಅವು ಆ ಸ್ಟಾರ್ ನಟರ ಚಿತ್ರಗಳಂತೆಯೂ ಇರದೇ, ಇತ್ತ ಕಡೆ ಅಪ್ಪಟ ಸೂರಿಯ ಚಿತ್ರಗಳಂತೆಯೂ ಇರದೇ ದಿಕ್ಕುತಪ್ಪಿದ ಕುದುರೆಯ ಓಟದಂತೆ ಧೂಳೆಬ್ಬಿಸಿ ಹೊರಟು  ಹೊದವು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ''ಜಂಗ್ಲೀ'' ಯಲ್ಲಿ ಸುಪರ್ ಹಿಟ್ ಹಾಡುಗಳ ಹೊರತಾಗಿ ನೆನಪುಳಿವಂಥದ್ದು ಎನೂ ಇರಲಿಲ್ಲ. ರಾಜ್ ಕುಟುಂಬದ ನಿರ್ಮಾಣದ ''ಜಾಕೀ'' ಚಿತ್ರ  ಜನಪ್ರಿಯ ಸಂಗೀತ ಮತ್ತು ಪುನೀತ್ ತಾರಾಮೌಲ್ಯದ ಸಹಕಾರದಿಂದ ಹಿಟ್ ಚಿತ್ರ ಎನಿಸಿಕೊಂಡರೂ ಅಣ್ಣಾಬಾಂಡ್ ಅಘಾತಕಾರಿಯಾಗಿತ್ತು. ಆದರೆ ಈ ಎಲ್ಲ ಚಿತ್ರಗಳಲ್ಲಿ ಸೂರಿಯವರ  ತಂಡ ಛಾಯಾಗ್ರಹಣ, ಸಂಗೀತ, ಸಾಹಸ ಸಂಯೋಜನೆ  ಮುಂತಾದ ತಾಂತ್ರಿಕ ಅಂಶಗಳಲ್ಲಿ ಮೇಲೇರುತ್ತಾ ಸಾಗಿದ್ದು ಸುಳ್ಳಲ್ಲ. ಜಾಕೀ ಚಿತ್ರದ ಫೈಟ್ ಗಳಂತೂ ರೊಮಾಂಚಕ. ಸತ್ಯ ಹೆಗಡೆಯಂತಹ ದೈತ್ಯ ಪ್ರತಿಭೆ ಹೊರಬರಲು ಸೂರಿಯೇ ಕಾರಣ.


ಇದೀಗ ಸೂರಿ ಉಳಿದ ಅನೇಕ ನಿರ್ದೇಶಕರುಗಳಂತೆ ''ಹಾಗೆ ಮಾಡಿದೀವಿ''  ''ಹೀಗೆ ಮಾಡಿದೀವಿ'' ಅಂತೇನೂ ಹೆಚ್ಚು ಕೊಚ್ಚಿಕೊಳ್ಳದೇ ಸದ್ದಿಲ್ಲದೇ ಕೆಲಸ ಮುಗಿಸಿ ''ಕಡ್ಡಿಪುಡಿ''ಯನ್ನು ಮಾರ್ಕೆಟ್ಟಿಗೆ ತಂದಿದ್ದಾರೆ. ರಾಜ್ ಕುಟುಂಬದವರೇ ಆದ ಶಿವರಾಜ್ ಕುಮಾರ್ ಇಲ್ಲಿ ನಾಯಕರಾದರೂ ಕೂಡ ಹಿಂದಿನ ಎರಡು ಪುನೀತ್ ಚಿತ್ರಗಳಲ್ಲಿ ಒತ್ತಡಕ್ಕೊಳಗಾದಂತೆ ಸೂರಿ ಇಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಹೊಸ ದಿಕ್ಕಿನಲ್ಲಿ ಕೆಲಸ ಮಾಡಿದ್ದಾರೆ. ಸೂರಿಯಂತೆಯೇ ಅನೇಕ ಸೋಲುಗಳಿಂದ ಕಂಗಾಲಾಗಿದ್ದ ಶಿವರಾಜ ಕುಮಾರ್ ಕೂಡ ತಮ್ಮನ್ನು ಸಂಪೂರ್ಣವಾಗಿ ಸೂರಿಯವರ ಕೈಗೆ ಒಪ್ಪಿಸಿಕೊಂಡಿದ್ದಾರೆ. ಬಿಡುಗಡೆಗೂ  ಮುಂಚೆ ಅನಗತ್ಯವಾದ ಹೈಪ್ ಉಂಟುಮಾಡದೇ ಸರಳವಾಗಿ ಬಿಡುಗಡೆ ಮಾಡಿರುವ ಚಿತ್ರವನ್ನು ಹೆಚ್ಚಿನ ನಿರೀಕ್ಷೆಗಳಿಲ್ಲದೇ ನೋಡಲು ಹೋಗುವ ಪ್ರೆಕ್ಷನಿಗೆ  ಹಬ್ಬದೂಟ ಉಣಬಡಿಸಿದ್ದಾರೆ ಸೂರಿ. ಇದು  ಅಂಡರ್ ವರ್ಲ್ಡ್ ನ ಕಥೆ ಆಧರಿಸಿರುವುದರಿಂದ ಹಾಗೂ ಹಳೆ ರೌಡಿಯೊಬ್ಬ ಸಾಮಾನ್ಯ ಬದುಕು ಕಟ್ಟಿಕೊಳ್ಳುವ ಕಥೆ ಹೊಂದಿದ್ದರಿಂದ ಅನೇಕರು ಇದು ''ಓಂ'' ನಂತಿದೆ ಅಂತಿದ್ದಾರೆ.ಶಿವರಾಜ್ ಕುಮಾರ್ ಮತ್ತು ಮಚ್ಚು ಚಿತ್ರದಲ್ಲಿರುವುದರಿಂದ ಹಾಗನ್ನಿಸುವುದು ಸಹಜ. ಕೆಲವರು ಹಿಂದಿಯ ''ಸತ್ಯಾ '' ಮತ್ತಿತರ ರಾಮ್ ಗೋಪಾಲ್ ವರ್ಮರ ಚಿತ್ರಗಳಿಗೆ ಹೋಲಿಸಿ ವಿಮರ್ಶಿಸುತ್ತಿದ್ದಾರೆ. ಇನ್ನೂ ಕೆಲವರು ಗಾಂಗ್ಸ್ ಆಫ್ ವಾಸೀ ಪುರ ನಂತಿದೆ ಅಥವಾ ಅಷ್ಟು ಚೆನ್ನಾಗಿದೆ ಎಂದು ಬರೆದಿದ್ದಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಸೂರಿ ಆ ಎಲ್ಲ ಹೋಲಿಕೆಗಳ ಸಂಭಾವ್ಯತೆಯಿದ್ದಾಗಿಯೂ ಕೂಡ, ಮಚ್ಚು ಲಾಂಗುಗಳಿಂದ ಕನ್ನಡ ಪ್ರೇಕ್ಷಕ ವಿಮುಖನಾಗಿರುವ ಈ ಕಾಲದಲ್ಲಿಯೂ ಕೂಡ ಇಂತಹ ಕಥೆಯನ್ನು ಆರಿಸಿಕೊಂಡು ಅಲ್ಲಿ ತಮ್ಮ ಛಾಪನ್ನು ಉಳಿಸಿಕೊಂಡು ವಿಭಿನ್ನ ನಿರೂಪಣೆ ಮತ್ತು ತಾರ್ಕಿಕ ಅಂತ್ಯದೊಂದಿಗೆ ಚಿತ್ರವನ್ನು ವಿಭಿನ್ನವಾಗಿಸಲು ಯಶಸ್ವಿಯಾಗಿದ್ದಾರೆ. ತೆಲುಗಿನ ಪೂರಿ ಜಗನ್ನಾಥ್ ರ ''ಬಿಸಿನೆಸ್ ಮ್ಯಾನ್'' ಚಿತ್ರದಂತೆ ಹಾಗೂ ಇನ್ನುಳಿದ ಅನೇಕ ಚಿತ್ರಗಳಂತೆ ರೌಡಿಯನ್ನು ''ಹೀರೋ'' ಮಾಡಿಹಾಕಿ ಅವನಿಂದ ಸಮಾಜದ  ಎಲ್ಲ ಸಮಸ್ಯೆಗಳಿಗೂ ಪರಿಹಾರ ತೋರಿಸಿಬಿಡುವ ಮೂರ್ಖ ಚಿತ್ರಗಳ ಪಟ್ಟಿಗೆ ಈ ಚಿತ್ರವೂ ಸೇರಿಬಿಡುವ ಅಪಾಯವಿತ್ತು. ಆದರೆ ಸೂರಿ ಅಂತಹ ತಪ್ಪನ್ನು ಅಪ್ಪಿತಪ್ಪಿಯೂ ಮಾಡಿಲ್ಲ. ಈ ಚಿತ್ರದಲ್ಲಿ ಹೀರೋ ಎಲ್ಲಿಯೂ ಕಾಣಿಸುವುದಿಲ್ಲ ಹಾಗೂ ವಿಲನ್ನುಗಳೂ ಇಲ್ಲ. ವ್ಯವಸ್ಥೆಯ ಒಳಗಿನ ಹುಳುಕುಗಳೇ ಇಲ್ಲಿ ಖಳನಾಯಕನ ಪಾತ್ರ ವಹಿಸಿವೆ. ಎನೂ ಅರಿಯದ ವಯಸ್ಸಿನಲ್ಲಿ ಬಡ ಹುಡುಗನೊಬ್ಬ ಸ್ನೇಹಕ್ಕಾಗಿ ಬಡಿದಾಡುವ ಹುಮ್ಮಸ್ಸಿನಲ್ಲಿ ನಡೆದು ಹೋಗುವ ಘಟನೆಗಳಿಂದಾಗಿ ಪೋಲಿಸ್ ಠಾಣೆ ಮೆಟ್ಟಿಲು ಹತ್ತುತ್ತಾನೆ. ಆ ಹುಡುಗನನ್ನು ಅವನಆಶ್ರಯದಾತರಿಂದ ಹಿಡಿದು ಅನೇಕರು ಬಳಸಿಕೊಳ್ಳುತ್ತಾರೆ.  ತನಗಾಗಿ ಅಂತ ಒಂದು ವೈಯಕ್ತಿಕ ಜೀವನವೇ ಇಲ್ಲದೇ  ಸ್ನೇಹಿತನಿಗಾಗಿ ಏನಾದರು ಸರಿ ಮಾಡಲು ಸಿದ್ಧವಾಗುವ ಒಬ್ಬ ಹುಂಬ ಹುಡುಗ ಈ ಕಡ್ಡಿಪುಡಿಅಲಿಯಾಸ್ ಆನಂದ. ಬಡ ಹುಡುಗಿಯೊಂದಿಗೆ ನಡೆಯುವ ಅವನ ಮದುವೆ, ಪೋಲಿಸ್ ವ್ಯವಸ್ಥೆಯಲ್ಲಿನ ರಾಕ್ಷಸ ಮುಖಗಳು, ಅನಗತ್ಯ ದ್ವೇಷ ಸಾಧಿಸುವ ಮೂರ್ಖರು ಮುಂತಾದ ಅನೇಕ ಸಂಗತಿಗಳ ಮಧ್ಯೆ ನಲುಗುವ ನಾಯಕನ ಸಂಘರ್ಷವನ್ನು ಸಮರ್ಥವಾಗಿ ಸೂರಿ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರವನ್ನು ಯಾವುದೇ  ಇತರ ಚಿತ್ರಗಳಿಗೆ ಹೋಲಿಸಿದರೆ ಅದು ತಪ್ಪಾಗುತ್ತದೆ. 

ಚಿತ್ರದ ಪ್ರಾರಂಭದಲ್ಲಿ ರಂಗಾಯಣ ರಘು ಅವರ ಆಂಗಿಕ ಭಾಷೆ ಮತ್ತು ಸ್ಲಂ ವಾತಾವರಣಗಳು ''ದುನಿಯಾ'' ಚಿತ್ರವನ್ನೇ ನೆನಪಿಸುತ್ತವಾದರೂ ಕೆಲವೇ ಕ್ಷಣಗಳಲ್ಲಿ ಚಿತ್ರ ಹೊಸ ರೂಪ ಪಡೆದುಕೊಂಡು ಎಲ್ಲವನ್ನು ಮರೆಸಿ ಮುಂದೆ ಸಾಗುತ್ತದೆ. ಆದರೆ ಬೆಂಗಳೂರಿನ ಸ್ಲಂ ಗಳಿಂದ ಸೂರಿ ಹೊರಬರದೇ  ಇರುವುದು ಅವರ ಬಲವೋ ಬಲಹೀನತೆಯೋ ತಿಳಿಯುವುದಿಲ್ಲ.  ಇಲ್ಲಿ ಮೈ ನವಿರೇಳಿಸುವ ದೃಶ್ಯಗಳಲ್ಲದೇ ಕಥೆಯಲ್ಲಿ ಹಾಸ್ಯವನ್ನು ಕೂಡ  ಹದವಾಗಿ ಸೂರಿ ಬೆರೆಸಿದ್ದಾರೆ. ಕೆಲ ದೃಶ್ಯಗಳಲ್ಲಂತೂ ಇದೇನು ನಾವು ಕಾಮಿಡಿ ಸಿನೆಮಾ ನೋಡುತ್ತಿದ್ದೆವಾ? ಎನಿಸುವಷ್ಟು ಸೂರಿ ನಗಿಸುತ್ತಾರೆ. ಆದರೆ ನಗಿಸಿದ ಮರುಕ್ಷಣ ಬೆಚ್ಚಿಬೀಳಿಸುವ ವಾಸ್ತವಗಳನ್ನು ಹೆಚ್ಚು ಆಡಂಬರವಿಲ್ಲದೇ ಪರಿಣಾಮಕಾರಿಯಾಗಿ ಹೇಳುತ್ತಾರೆ.  ಬಿಗುವಾದ ಚಿತ್ರಕಥೆಯ  ಹಾಗು ಅತ್ಯುತ್ತಮ ತಾಂತ್ರಿಕ ಶ್ರೀಮಂತಿಕೆಯ ಮೊದಲಾರ್ಧ ಮುಗಿದದ್ದೇ ಗೊತ್ತಾಗುವುದಿಲ್ಲ. ಚುರುಕು ಸಂಭಾಷಣೆಯ ಜೊತೆಗೆ ಡಾ. ರಾಜ್ಕುಮಾರ್ ರಸ್ತೆ,  ಮಿಣ ಮಿಣ ಎನ್ನುವ ಒಂದು ಟ್ಯೂಬ್ ಲೈಟ್, ಮತ್ತು ಒಂದು ಕೊಡೆ ಮುಂತಾದ ವಸ್ತುಗಳನ್ನು ಕಥೆಯ ಪಾತ್ರಗಳಾಗಿ ಬಳಸಿಕೊಂಡು ಕಥೆಗೆ ತಿರುವು ನೀಡುವ ಪರಿ ಅನನ್ಯ. ಬಡ ಹುಡುಗಿಯ ಕಿತ್ತು ಹೋದ ಚಪ್ಪಲಿಯ ಅಂಗುಷ್ಠ ವನ್ನು ತೋರಿಸುವ ಸೂರಿ ಎಷ್ಟು ಸೂಕ್ಷ್ಮಗ್ರಾಹಿ ಎನ್ನುವುದು ಮತ್ತೆ ಸಾಬೀತಾಗಿದೆ. ಈ ಬಾರಿ ಸತ್ಯ ಹೆಗಡೆ ಇಲ್ಲದೆ ಹೋದರೂ (ಕೆಲವೊಂದು ಜಾಗಗಳಲ್ಲಿ ಸತ್ಯ ಹೆಗಡೆಯವರ ಅನುಪಸ್ಥಿತಿ ಗೋಚರವಾದರೆ ಅದರ ಕೃಷ್ಣ ಅವರ ತಪ್ಪಲ್ಲ.) ಕೃಷ್ಣರ ಸಹಕಾರದಿಂದ ಸೂರಿ ಒಂದು ಸುಂದರ ಪೇಂಟಿಂಗ್ ನಂತೆ ಚಿತ್ರವನ್ನು ಬಿಡಿಸುತ್ತ ಹೋಗುತ್ತಾರೆ. ಅಲ್ಲಿ ಕಾವ್ಯಕ್ಕೂ ಜಾಗವಿರುತ್ತದೆ.


ಜೀವವೇ  ಪ್ರೀತಿಸು ಜೀವ ಹೋಗುವಂತೆ
ಸಂತೆಯ ಮಧ್ಯವೇ ಸ್ವಪ್ನ ತಾಗುವಂತೆ
ನಮ್ಮಿಬ್ಬರಲ್ಲೂ  ರೂಪಾಂತರ
ಆಗಾಗ ಸಣ್ಣ ಮಧ್ಯಂತರ
ಕನ್ನಡಿಯಲ್ಲಿಯೂ ಕಣ್ಣಿಗೆ ಬೀಳದ ಭೂಮಿಕೆಯೂ
ಇದೇತಕೂ ಸೆಳೆದಂತಿದೆ ನಿನ್ನನೂ

ಇಂತಹ ಸಾಲುಗಳು ಕೇವಲ ಸೂರಿ ಚಿತ್ರದಲ್ಲಿ ಮಾತ್ರ ಜಾಗ ಪಡೆಯಲು ಸಾಧ್ಯ. ಚಿತ್ರದ  ಕಥೆಯ ಆರಂಭದ ಹತ್ತು ನಿಮಿಷ ಮಾತ್ರ ಶಿವರಾಜ್ ಕುಮಾರ್ ಕಾಣಿಸುತ್ತಾರೆ. ಆಮೇಲೆ ಅವರು ಸಂಪೂರ್ಣವಾಗಿ ಆನಂದ್ ಅಲಿಯಾಸ್ ಕಡ್ಡಿಪುಡಿಯಾಗಿ ಪರಕಾಯ ಪ್ರವೇಶ ಮಾಡಿ ಬಿಟ್ಟಿದ್ದಾರೆ.  ಚಿತ್ರದ ಮೊದಲ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಅನಂತನಾಗ್  ಕಥೆಯನ್ನು ಮುನ್ನಡೆಸಿಕೊಂಡು ಹೊಗುತ್ತಾರೆ ಮತ್ತು ಕ್ಲೈಮಾಕ್ಸ್ ವರೆಗೂ ಅವರ ಪಾತ್ರ ನಿರ್ಣಾಯಕವಾಗಿದೆ. . ಅವರ ಯೋಗ್ಯತೆಗೆ ತಕ್ಕ ಪಾತ್ರದಲ್ಲಿ ಅನಂತನಾಗ್ ಅತ್ಯಂತ ಸಹಜವಾಗಿ ಒದಗಿ ಹೋಗಿದ್ದಾರೆ. ಅವರು ಯಾವ ಹಾಲಿವುಡ್ ನ ಆಸ್ಕರ್ ವಿಜೇತ ನಟನಿಗೂ ಕಮ್ಮಿ ಇಲ್ಲ ಎನುವುದು ಅವರ ಬಾಡಿ ಲ್ಯಾಂಗ್ವೇಜ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ರಂಗಾಯಣ ರಘು ಕೆಲವೇ ದೃಶ್ಯಗಳಲ್ಲಿ ದುನಿಯಾ ಹ್ಯಾಂಗೋವರಿನಲ್ಲಿದ್ದಂತೆ ಕಂಡು ಬಂದರೂ ಗಮನಾರ್ಹ ರೀತಿಯಲ್ಲಿ ಅವರ ಪಾತ್ರದ ಶೇಡ್  ಗಳು ಬದಲಾಗುತ್ತವೆ. ರಾಧಿಕಾ ಪಂಡಿತ್ ಈ ಚಿತ್ರದ ಸೆನ್ಸೇಷನ್ ಎಂದರೆ ತಪ್ಪಾಗಲಾರದು. ಅಷ್ಟು ಅದ್ಭುತವಾಗಿ ರಾಧಿಕಾ ತನ್ನ ಪಾತ್ರವನ್ನು ನಿಭಾಯಿಸಿದ್ದಾರೆ. ಕಣ್ಣುಗಳಲ್ಲೇ ಮಾತಾಡಿಬಿಡುತ್ತಾರೆ. ಹರಿಕೃಷ್ಣರ ಸಂಗೀತ ಹೊಸದಾಗಿದೆ. ಹಾಡುಗಳಿಗಿಂತ ಹಿನ್ನೆಲೆ ಸಂಗೀತದಲ್ಲಿ ಅವರು ಜಾಸ್ತಿ ಸ್ಕೋರ್ ಮಾಡಿದ್ದಾರೆ.

2 comments:

  1. ತುಂಬಾ ಚೆನ್ನಾಗಿ ಬರೆದಿದ್ದೀರಿ..!

    ReplyDelete
  2. ನಿಮ್ಮ ವಿಮರ್ಶೆ ಓದಿದ ಮೇಲೆ, ಮತ್ತೊಮ್ಮೆ, ಚಿತ್ರ ನೋಡ ಬೇಕು ಅನಿಸುತ್ತಿದೆ

    ReplyDelete