Sunday, May 5, 2013

ಮುಂಬೈ ಟಾಕೀಸ್ ಗೆ ಹೋಗಿದ್ರಾ ?


ಭಾರತೀಯ ಚಲನಚಿತ್ರ ಉದ್ಯಮ ನೂರು ವರ್ಷ ಪೋರೈಸಿದೆ. ಹೀಗಾಗಿ  ಕಳೆದ ಒಂದು ವರ್ಷದಿಂದ (ಬೆಂಗಳೂರಿನ ಗರುಡಾ ಮಾಲ್ ಸೇರಿದಂತೆ) ಉದ್ಯಮಕ್ಕೆ ಸಂಬಂಧಿಸಿದ ಅನೇಕರು ವಿವಿಧ ರೀತಿಯಲ್ಲಿ ಆ ಸಂಭ್ರಮ ಆಚರಿಸಿದ್ದಾರೆ. ಅದೇ ರೀತಿ ಬಾಲಿವುಡ್ಡಿನ  ವಯೋಕಾಂ 18 ಎಂಬ ನಿರ್ಮಾಣ ಸಂಸ್ಥೆ ಕೂಡ  ಸಂಭ್ರಮಾಚರಣೆಯ ಭಾಗವಾಗಿ ಒಂದು ಚಿತ್ರ ನಿರ್ಮಾಣ ಮಾಡಿದೆ. ಬಾಲಿವುಡ್ಡಿನ ನಾಲ್ಕು ಯುವ ನಿರ್ದೇಶಕರನ್ನ ಕರೆದು ಪ್ರತಿಯೊಬ್ಬರಿಗೂ ಒಂದೂವರೆ  ಕೋಟಿ ರೂಪಾಯಿಗಳ  ಬಡ್ಜೆಟ್ ನೀಡಿ  ತಲಾ ಇಪ್ಪತ್ತೈದು ನಿಮಿಷಗಳ ಕಿರು ಚಿತ್ರಗಳನ್ನು ಮಾಡಿಸಿ ಅವುಗಳನ್ನು ಒಟ್ಟುಗೂಡಿಸಿ ''ಮುಂಬೈ ಟಾಕೀಸ್'' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ .
ಈ ಚಿತ್ರ ಭಾರತೀಯ ಚಿತ್ರರಂಗದ ಎಲ್ಲರೂ ಸೇರಿ ನಿರ್ಮಿಸದೇ ಹೋದರೂ, ಹಾಗೂ ಭಾರತ ಸರ್ಕಾರ ಈ ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಕೈ ಜೊಡಿಸದಿದ್ದರೂ ಕೂಡ  ಇದು ಭಾರತೀಯ ಚಿತ್ರರಂಗದ ಅಧಿಕೃತ ಶತಮಾನೋತ್ಸವ ಆಚರಣೆಯಂತೆ ಬಿಂಬಿಸಲ್ಪಟ್ಟು  ಮೊನ್ನೆ ಶುಕ್ರವಾರ ಮೇ 3 ರಂದು ಚಿತ್ರ ಬಿಡುಗಡೆಯಾಗಿದೆ.   1913 ರ ಮೇ 3 ರಂದು  ದಾದಾ ಸಾಹೇಬ್ ಫಾಲ್ಕೆ ಅವರ ಮೊದಲ ಚಿತ್ರ ''ರಾಜಾ ಹರಿಶ್ಚಂದ್ರ'' ತೆರೆ ಕಂಡಿತ್ತು. ಹೀಗಾಗಿ ಬಿಡುಗಡೆಯ ದಿನಾಂಕ ಮತ್ತು ಈ ಚಿತ್ರದಲ್ಲಿನ ನಾಲ್ಕೂ ಕಿರು ಚಿತ್ರಗಳು ಭಾರತೀಯರ ಜೀವನದಲ್ಲಿನ ಸಿನೆಮಾದ ಮಹತ್ವವನ್ನು ಹೇಳುವ ಕಥೆಗಳೇ ಆಗಿರುವುದರಿಂದ ಇದನ್ನು ಶತಮಾನೋತ್ಸವ ಆಚರಣೆ ಎಂದೇ ಪರಿಗಣಿಸಬಹುದು. ಆದರೆ ದಾದಾ ಸಾಹೇಬ್ ಫಾಲ್ಕೆ ಅವರ ಸ್ಮರಣೆ ಕೂಡ  ಚಿತ್ರದ ಪ್ರಾರಂಭದಲ್ಲಿ ಇಲ್ಲದೇ ಇರುವುದು ವಿಷಾದನೀಯ. ವಾಸ್ತವವಾಗಿ ದಾದಾ ಸಾಹೇಬ್ ಫಾಲ್ಕೆ ಅವರ ಬಗ್ಗೆಯೇ ಒಂದು ಉತ್ತಮ ಚಿತ್ರ ಮಾಡಬಹುದಾಗಿತ್ತು. (ನಾಲ್ಕು ವರ್ಷಗಳ ಹಿಂದೆಯೇ ಮರಾಠೀ  ಭಾಷೆಯಲ್ಲಿ ದಾದಾ ಸಾಹೇಬ್ ರವರ ಬಗ್ಗೆ ಅತ್ತ್ಯುತ್ತಮ ಗುಣಮಟ್ಟದ ಚಿತ್ರ ನಿರ್ಮಾಣ ಆಗಿದೆ. ಆದರೆ ಅದು ಶತಮಾನೋತ್ಸವದ ಆಚರಣೆಯ ಅಂಗವಾಗಿ ಆಗಿರಲಿಲ್ಲ ಮತ್ತು ಅದು ಕೇವಲ ಒಂದು ಪ್ರಾದೇಶಿಕ ಭಾಷಾ ಚಿತ್ರವಾಗಿತ್ತು)

ಇದೆಲ್ಲ ಪಕ್ಕಕ್ಕಿಟ್ಟು   ಈ ನಾಲ್ಕು ಜನ ನಿರ್ದೇಶಕರ ನಾಲ್ಕು ಕಿರುಚಿತ್ರಗಳ ಈ ಗುಚ್ಛ ಹೇಗಿದೆ ಅಂತ ನೋಡುವುದಾದರೆ..   ಅದು ಒಂದು ಹೊಸ ಅಧ್ಯಾಯದ ಪ್ರಾರಂಭದಂತೆಯೇ ನವನವೀನತೆಯಿಂದ ಕೂಡಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಚಿತ್ರಗಳು ನಿರ್ಮಾಣವಾಗುವ ಕಾಲ ಸನ್ನಿಹಿತವಾಗಿದೆ ಎಂಬ ಹೊಸ ಭರವಸೆಯನ್ನು ಮೂಡಿಸುವಂತಿದೆ. ನಾಲ್ಕೂ ಕಿರುಚಿತ್ರಗಳು ಉತ್ತಮವಾಗಿವೆ.
ಮೊದಲನೇ ಕಿರು ಚಿತ್ರ ಕರಣ ಜೋಹರ್ ನದ್ದು. ಸಲಿಂಗಕಾಮಿಯಾದ ಮಧ್ಯಮ ವರ್ಗದ ಯುವಕನೊಬ್ಬನನ್ನು ಪ್ರೊಫೆಸರ್ ಆಗಿರುವ ತಂದೆಯೂ ಕೂಡ ಅರ್ಥ ಮಾಡಿಕೊಳ್ಳದೆ ನಿಂದಿಸಿ ಮನೆಯಿಂದ ಹೊರದಬ್ಬುವಲ್ಲಿಗೆ ಅದರ ಕಥೆ ಶುರುವಾಗುತ್ತದೆ. ಕಡಿಮೆ ಸಂಭಾಷಣೆ, ಕ್ಲೋಸ್-ಅಪ್ ಶಾಟ್ ಗಳು,  ವೇಗವಾದ ಚಿತ್ರಕಥೆ ಮೂಲಕ ಚಲಿಸುವ ಚಿತ್ರದಲ್ಲಿ  ವಿವರಗಳು ಕಡಿಮೆ ಇರುವುದರಿಂದ ಸಾಮನ್ಯ ಪ್ರೆಕ್ಷಕನಿಗೆ ಗಲಿಬಿಲಿಯಾಗುತ್ತದೆ. ಕೊನೆಯಲ್ಲಿ ಚಿತ್ರ ಅರ್ಥವಾದರೂ ಕೂಡ ಪಾತ್ರಗಳ ವಿಕ್ಷಿಪ್ತತೆಗೆ ಅರ್ಥ ತಿಳಿಯಲು ಕೊನೆಯ ವರೆಗೆ ಕಾಯುವುದು ಸ್ವಲ್ಪ ಕಿರಿಕಿರಿ. ತಾನು ಸಲಿಂಗಕಾಮಿಯಾಗಿದ್ದೂ ಕೂಡ ಸಾಮಾಜಿಕ ತಿರಸ್ಕಾರಕ್ಕೆ ಅಂಜಿ ಅದನ್ನು ಮುಚ್ಚಿಟ್ಟು ಸುಳ್ಳು ಹೇಳಿ ಹೆಣ್ಣಿನೊಂದಿಗೆ ಮದುವೆಯಾಗುವುದು ತಪ್ಪು ಎನ್ನುವ ಸಂದೇಶದೊಂದಿಗೆ ಚಿತ್ರ ಮುಗಿಯುತ್ತದೆ. ರಾಣಿ ಮುಖರ್ಜಿ ಬಾಲಿವುಡ್ಡಿನ ಗಾಸಿಪ್ ಬರೆಯುವ ಪತ್ರಿಕೆಯ ಸಂಪಾದಕಿಯಾಗಿ ಹಾಗೂ ಲೈಂಗಿಕ ಅತೃಪ್ತಳಾದ   ವಿವಾಹಿತ-ಮಹಿಳೆಯಾಗಿ ಮಾಡಿದ ನಟನೆ ಮತ್ತು ಅವಳು  ಕಾಣಿಸಿಕೊಂಡ ರೀತಿ ಅಚ್ಚರಿ ಮೂಡಿಸುತ್ತದೆ. ಅದು ಕಥೆಗೆ ಸರಿಯಾಗಿಯೇ ಇದ್ದರೂ ಕೂಡ ಅವಳನ್ನು ಸಾಪ್ರದಾಯಿಕ ಮತ್ತು ಬಬ್ಲಿ ಗರ್ಲ್ ಪಾತ್ರಗಳಲ್ಲಿ ಮೆಚ್ಚಿ ಅರಾಧಿಸುವವರಿಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಈ ಚಿತ್ರದ ವಿಚಿತ್ರವಾದ ಮೂಡ್ ನಿಂದ ಚೇತರಿಸಿಕೊಳ್ಳುವಷ್ಟರಲ್ಲೇ ದಿವಾಕರ್ ಬ್ಯಾನರ್ಜಿಯ ಕಿರು ಚಿತ್ರ ಪ್ರಾರಂಭವಾಗಿ ಬೇರೊಂದು ಲೋಕಕ್ಕೆ ಕರೆದುಕೊಂಡು ಹೊಗುತ್ತದೆ.
ಹಳೆ ಮುಂಬೈನ ಇರುಕು-ಮುರುಕು  ಚಾಳ್ ನಲ್ಲಿ ವಾಸಿಸುವ ನಿರುದ್ಯೋಗಿ ತಂದೆಯೊಬ್ಬ ತನ್ನ ಮಗಳಿಗೆ ಪ್ರತಿ ದಿನ ಒಂದು ಸಿನೆಮಾದ ಕಥೆ ಹೇಳಿ ಹೇಳಿ ಖಾಲಿಯಾಗಿರುತ್ತನೆ. ಅವನು ಹೇಳುವ ಎಲ್ಲ ಕಥೆಗಳೂ ಮಗಳಿಗೆ ಹಳೆಯದಾಗಿ ಹೊಗಿರುತ್ತವೆ.  ಹೊಸ ಚಿತ್ರ ನೋಡಲು ಅವನ ಬಳಿ  ಹಣ ಇರುವುದಿಲ್ಲ.  ಹೆಂಡತಿಯ ಸಂಬಳದಿಂದ ಸ್ವಲ್ಪ ಹಣ ಕೂಡಿಸಿ  ಇಮೋ ಹಕ್ಕಿಯನ್ನು ತಂದು ಸಾಕಿ ಅದರ ಮೊಟ್ಟೆ ಮಾರಿ ಬಿಸಿನೆಸ್ ಮ್ಯಾನ್ ಆಗುವ ಪ್ರಯತ್ನದಲ್ಲ್ಲಿಯೂ ಸೋತು ನೆರೆ ಹೊರೆ ಹೆಂಗಸರಿಂದ ಅಪಹಾಸ್ಯಕ್ಕೊಳಗಾಗುತ್ತಿರುತ್ತಾನೆ. ಇಂತಹ ನಿಸ್ಸಹಾಯಕ ವ್ಯಕ್ತಿ ಒಂದು ಸೆಕ್ಯುರಿಟಿ ಗಾರ್ಡ್ ಉದ್ಯೋಗದ ಸಂದರ್ಶನಕ್ಕೆ ಹೋಗಿ  ಮನೆಗೆ ಮರಳುವ ಹಾದಿಯಲ್ಲಿ ಒಬ್ಬ ದೊಡ್ಡ ಸ್ಟಾರ್ ನಟನ ಸಿನೆಮಾ ಶೂಟಿಂಗ್ ನೋಡುತ್ತಾ ನಿಲ್ಲುತ್ತಾನೆ. ಮುಂದೆ ನಡೆಯುವ ಘಟನೆಗಳನ್ನು ಹೇಳಿ ನಾನು ನಿಮ್ಮ ಸಂತೋಷ ಹಾಳು  ಮಾಡುವುದಿಲ್ಲ. ಅದನ್ನು ನೀವು ನೋಡಿ ಸುಖಿಸಿದರೆನೇ ಚೆಂದ. ಈ ಕಿರು ಚಿತ್ರದ ಕೊನೆಯ ಎರಡು ಮೂರು ನಿಮಿಷಗಳಲ್ಲಿ ಮೂಡಿ ಬರುವ ದ್ವನಿ ರಹಿತವಾದ ನಟನಾ ಚಿತ್ರಿಕೆಯನ್ನು  ದೂರದಿಂದ ಮೃದುವಾದ ಮುರಳೀ ನಾದದೊಂದಿಗೆ ತೊರಿಸಲಾಗಿದೆ. ಅದನ್ನು ನೋಡುವಾಗ ನಿಮ್ಮ ಕಣ್ಣು ಒದ್ದೆಯಾಗದೇ ಹೋದರೆ, ನಿಮಗೆ ಸಿನೆಮಾ ನೋಡಲಿಕ್ಕೆ ಬರುವುದಿಲ್ಲ ಅಥವಾ ನಿಮ್ಮದು ಮಾನವಸಹಜ ಸಂವೇದನೆ ಇಲ್ಲದ ಹೃದಯ ಎಂದೇ ಹೇಳಬೇಕಾಗುತ್ತದೆ. ಇಲ್ಲಿ ನವಾಜುದ್ದೀನ್ ಸಿದ್ದಿಕಿ ಎಷ್ಟು ಅದ್ಭುತ ನಟ ಅನ್ನುವುದು ಮತೊಮ್ಮೆ ಸಾಬೀತಾಗಿದೆ. ಇದು ಮೂಲದಲ್ಲಿ ಸತ್ಯಜಿತ್ ರೆ ಅವರು ಬರೆದ ಬೆಂಗಾಲೀ ಕಿರುಗಥೆ ಯಾಗಿದ್ದು ಅದನ್ನು ಇಲ್ಲಿ   ಈಗಿನ ಕಾಲಕ್ಕೆ ತಕ್ಕಂತೆ ಬದಲಾಯಿಸಲಾಗಿದೆ ಮತ್ತು ಕಥೆಯ ಹಿನ್ನೆಲೆ ಕಲ್ಕತ್ತಾದಿಂದ ಮುಂಬೈ ಗೆ ಶಿಫ್ಟ್ ಮಾಡಿಕೊಳ್ಳಲಾಗಿದೆ 

ವಿರಾಮದ ನಂತರದ ಮೂರನೇ ಕಿರುಚಿತ್ರವನ್ನು ಝೊಯಾ ಅಖ್ತರ್ ನಿರ್ದೆಶಿಸಿದ್ದಾಳೆ.  ಶಾಲೆಗೇ ಹೋಗುವ ಬಾಲಕನೊಬ್ಬ ಕತ್ರಿನಾ ಕೈಫ್ ಡಾನ್ಸ್ ನೋಡಿ ಅದರಿಂದ  ಪ್ರೇರಿತನಾಗಿ ಡಾನ್ಸರ್ ಆಗುವ ಕನಸು ಕಟ್ಟಿಕೊಳ್ಳುವ ಕಥೆ ಹೊಂದಿರುವ ಈ ಚಿತ್ರ ಇದು. ಅನೇಕ ಉತ್ತಮ ದೃಶ್ಯಸಂಯೋಜನೆಗಳಿಂದಾಗಿ ಮನಸಿಗೆ ಖುಷಿ ಕೊಡುತ್ತದೆ. ಆದರೆ ಅತಾರ್ಕಿಕವಾಗಿ ಅಂತ್ಯ ಕಾಣುತ್ತದೆ.

ಕೊನೆಯ ಕಿರುಚಿತ್ರ ಅನುರಾಗ್ ಕಶ್ಯಪ್ ಎಂಬ ಅಪ್ಪಟ ದೇಸೀ ಪ್ರತಿಭೆಯ ಕೈ ಚಳಕದಿಂದ ಮೂಡಿದ್ದು. ಉತ್ತರ ಪ್ರದೇಶದ ಹಳ್ಳಿಯಲ್ಲಿ ಜೀವಿಸುವ ಅಮಾಯಕ ಯುವಕನೊಬ್ಬ ತನ್ನ ತಂದೆಯ ಆಸೆಯಂತೆ ಅಮಿತಾಭ್ ಬಚ್ಚನ್ ನನನ್ನು ಭೇಟಿಯಾಗಿ ಅವರಿಗೆ ತನ್ನ ತಾಯಿ ಮಾಡಿದ ಮುರಬ್ಬಾ ಎನ್ನುವ ಖಾದ್ಯ ತಿನ್ನಿಸಿ ಹೋಗಲು ಮುಂಬೈಗೆ ಬರುತ್ತಾನೆ. ಅಮಿತಾಭ್ ಬಚ್ಚನ್ ತಿಂದಮೇಲೆ ಉಳಿದಿರುವ ಎಂಜಲು ''ಮುರಬ್ಬಾ''ವನ್ನು ತಿನ್ನುವುದು ಆ ಯುವಕನ ತಂದೆಯ ಕೊನೆಯ ಆಸೆಯಾಗಿರುತ್ತದೆ. ಅನುರಾಗ್ ಕಶ್ಯಪ್ ಶೈಲಿಯ ಪಕ್ಕಾ ದೇಸೀ ಸಂಭಾಷಣೆ ಮತ್ತು ನಿರ್ದೇಶನ ನಗಿಸಿ ನಗಿಸಿ ಸುಸ್ತು ಮಾಡಿ ಹಾಕುತ್ತವೆ. ಆದರೆ ಕಥೆ ಮುಂದುವರೆದಂತೆ ಹಾಸ್ಯ ವಿಷಾದವಾಗಿ, ಅನುಕಂಪವಾಗಿ ಬದಲಾಗಿ ಪ್ರೇಕ್ಷಕನಿಗೆ ಅದ್ಭುತವಾದ ಸಿನೆಮಾಟಿಕ್ ಅನುಭವವನ್ನು ನೀಡುತ್ತದೆ.  ಒಂದು ದೃಶ್ಯದಲ್ಲಿ ಅಮಿತಾಭ್ ಬಚ್ಚನ್ ಸ್ವತಃ ಕಾಣಿಸುತ್ತಾರೆ.

ಒಮ್ಮೆ ನೋಡಿಬನ್ನಿ ..