Saturday, September 21, 2013

''ಲಂಚ್ ಬಾಕ್ಸ್'' ನೊಳಗಿನ ಜೀವನ

ಈ ಬಾರಿಯ ಕಾನ್ಸ್ ಚಿತ್ರೋತ್ಸವದ critic's week ನಲ್ಲಿ ಪ್ರದರ್ಶನಗೊಂಡು ಬಹಳ ಪ್ರಶಂಸೆಗಳನ್ನು ಪಡೆದಿದ್ದ ಹಿಂದೀ ಚಿತ್ರ ''ಲಂಚ್ ಬಾಕ್ಸ್''  ಉತ್ತಮ ನಿರೀಕ್ಷೆಗಳ ಜೊತೆಗೇ, ಸೂಕ್ತ ಪ್ರಚಾರದೊಂದಿಗೆ ಬಿಡುಗಡೆಯಾಗಿದೆ. ಮುಂಬೈನ ಮಧ್ಯಮವರ್ಗದ ನೌಕರಿದಾರ ಜೀವನದ ಅಂಗವಾಗಿ ಹೋಗಿರುವ ಡಬ್ಬಾವಾಲಾಗಳು ಮನೆಗಳಿಂದ ಮಧ್ಯಾನ್ಹದ ಊಟದ ಡಬ್ಬಿಯನ್ನು ಅವುಗಳ ಯಜಮಾನರು ಕೆಲಸ ಮಾಡುವ ಕಛೇರಿಗಳಿಗೆ ತಲುಪಿಸುವ ವ್ಯವಸ್ಥೆ ಅತ್ಯಂತ ಜನಪ್ರಿಯ. ಅಪಾರ್ಟಮೆಂಟ್ ನಲ್ಲಿ ವಾಸಿಸುವ ಗೃಹಿಣಿಯೊಬ್ಬಳು ತನ್ನ ಗಂಡನಿಗಾಗಿ ಕಳಿಸುವ ಊಟದ ಡಬ್ಬಿ ಒಂದು ದಿನ ತಲುಪಬೇಕಾದ ಜಾಗ ಬಿಟ್ಟು ಬೇರೆ ವ್ಯಕ್ತಿಯ ಬಳಿಗೆ ಬಂದು ಸೇರುತ್ತದೆ.  ಆ ಗೃಹಿಣಿಗೂ ಮತ್ತು ಒಬ್ಬ ಇಳಿವಯಸ್ಸಿನ ವಿದುರ ವ್ಯಕ್ತಿಗೂ ಮಧ್ಯದ ಪತ್ರಸಂವಾದಕ್ಕೆ ಅವಕಾಶ ಮಾಡಿಕೊಡುವ ಆ ಲಂಚ್ ಬಾಕ್ಸ್ ಅವರಿಬ್ಬರ ಜೀವನಗಳನ್ನು ಪರಸ್ಪರರಿಗೆ ಪರಿಚಯಿಸುತ್ತದೆ. ಆ ಲಂಚ್ ಬಾಕ್ಸ್ ಅನ್ನು ಸರಿಯಾದ ವಿಳಾಸಕ್ಕೆ ತಲುಪುವಂತೆ ಮಾಡುವ ಅವಕಾಶವಿದ್ದಾಗಿಯೂ ತನ್ನ ಅಡುಗೆಯ ರುಚಿಯನ್ನು ಮೆಚ್ಚಿಕೊಂಡನೆಂಬ ಒಂದೇ ಕಾರಣಕ್ಕೆ ಆಕೆ ಆ ಡಬ್ಬಿಯ ಒಳಗಿನ ಪತ್ರಸಂವಾದನ್ನು ಮುಂದುವರೆಸುತ್ತಾಳೆ. ಅವರಿಬ್ಬರೂ ಊಟದ ದಡಬ್ಬಿಯಲ್ಲಿ ಪತ್ರದಿಂದ ಮುಂದುವರೆದು, ಟೆಲಿಫೋನ್.. ಮೊಬೈಲ್ ಫೋನ್ ಮುಂತಾದ ಸಂಪರ್ಕ ಸಾಧನಗಳನ್ನು ಬಳಸಿಕೊಳ್ಳದೇ ಇರಲು ಕಾರಣ ಇಬ್ಬರಿಗೂ ಇರುವ ಸಾಮಾಜಿಕ ಸಂಕೋಚ ಮತ್ತು ಕಡಿಮೆ ಮಾತಿನ ಸ್ವಭಾವಗಳಾದರೂ ಚಿತ್ರದ ಪ್ರಧಾನ ವಿಷಯಗಳ ನಿರೂಪಣೆಯಲ್ಲಿ ಆ ಲಂಚ್ ಬಾಕ್ಸ್ ಪ್ರಧಾನ ಕೊಂಡಿಯಾಗಿರುವುದರಿಂದ ಇಲ್ಲಿ ತರ್ಕ ಮಾಡುವುದು ಮೂರ್ಖತೆಯಾಗುತ್ತದೆ.
  ಕಳೆದೆರಡು ದಶಕಗಳಲ್ಲಿ ಬೆಂಗಳೂರು ಎಷ್ಟೇ ದೊಡ್ಡ ಮಹಾನಗರವಾಗಿ ಬೆಳೆದು ನಿಂತಿದ್ದರೂ ಕೂಡ ಮುಂಬೈ ನಗರದ ಲೋಕಲ್ ಟ್ರೈನ್, ಡಬ್ಬಾವಾಲಾಗಳು, ಚಾಳ್ ಗಳು ಮುಂತಾದ ಅನೇಕ ಸಂಗತಿಗಳು ಇಲ್ಲಿನವರಿಗೆ ಅಪರಿಚಿತವೇ. ಮುಂಬೈಗೆ ತನ್ನದೇ ಆದ ವಿಶಿಷ್ಟತೆಯಿದೆ. ಇಂತಹ ಮುಂಬಯಿ ನಗರದ ಇರುಕಾದ ಅಪಾರ್ಟಮೆಂಟ್ ಒಂದರ ಅಡಿಗೆ ಮನೆಯಲ್ಲಿ ಸಿದ್ಧವಾಗಿ ಹೊರಬರುವ ''ಲಂಚ್ ಬಾಕ್ಸ್''  ಗಾಂಧೀ ಟೋಪೀ ಹಾಕಿದ, ಹಣೆಗೆ ನಾಮ ಇಟ್ಟುಕೊಂಡು ತುಕಾರಾಮನ ಭಜನೆ ಮಾಡುತ್ತ ತನ್ನ ಕಾಯಕ ಮಾಡುವ ಡಬ್ಬಾವಾಲಾನ ಸೈಕಲ್ ಕ್ಯಾರಿಯರ್ ನಲ್ಲಿ ನೇತಾಡುವುದರ ಮೂಲಕ ಈ ಚಿತ್ರ ತೆರೆದುಕೊಳ್ಳುತ್ತದೆ.
ಹಳ್ಳಿಗಳಲ್ಲಿ ಇರುವವರು ನಗರಗಳಲ್ಲಿ ಇರುವ ಜನ ತಮಗಿಂತ ಸುಖಿ ಅಂದುಕೊಳ್ಳುತ್ತಾರೆ. ನಗರಗಳಲ್ಲಿರುವವರು ಮಹಾನಗರಗಳಲ್ಲಿರುವರು ತಮಗಿಂತ ಸುಖಿಗಳೆಂದೇ ಭಾವಿಸಿರುತ್ತಾರೆ. ತಾನಿರುವ ಸ್ಥತಿಗಿಂತ ಭಿನ್ನವಾದ ಮತ್ತೊಂದು ಸ್ಥಿತಿಯೆಡೆಗೆ ಆಕರ್ಷಿತನಾಗುವುದು ಮಾನಸವಸಹಜ ಗುಣಧರ್ಮ. ಹೀಗೆ ಸೌಲಭ್ಯಗಳ, ಅವಕಾಶಗಳ, ಸುಖದ ಖಜಾನೆಗಳಾಗಿ ಕಂಡು ಎಲ್ಲೆಡೆಯಿಂದ ಜನರನ್ನು ಸೆಳೆಯುವ  ಮಹಾನಗರಗಳು .. ತಾನು ಕೊಡುವ ಆ ಸುಖಕ್ಕೆ ಸುಂಕವಾಗಿ ವಸೂಲು ಮಾಡುವ ಬೆಲೆ ಎಂಥದ್ದು..? ಎನ್ನುವ ಸಂಗತಿಯನ್ನು ಮೂರೇ ಮೂರು ಪಾತ್ರಗಳ ಮೂಲಕ ಈ ಚಿತ್ರ ಹೇಳುತ್ತದೆ. ಮುಂಬೈನ ಲೋಕಲ್ ರೈಲು, ಡಬ್ಬಾವಾಲಾ ವ್ಯವಸ್ಥೆ ಮುಂತಾದವುಗಳು ಅದಕ್ಕೆ ಪೂರಕ ಪಾತ್ರಗಳಾಗಿವೆ. 
ಯಾರಿಂದಲೂ ಯಾವುದನ್ನೂ ಅಪೇಕ್ಷೆ ಪಡದೇ ಇರುವಂತೆ ಕಾಣುವ, ಅಸ್ಪಷ್ಟ ಹಿನ್ನೆಲೆಯ ನಾಯಕ ಈ ಊಟದ ಡಬ್ಬಿಯಲ್ಲಿ ಪ್ರತಿದಿನ ಅಪರಿಚಿತ ಮಹಿಳಯಿಂದ ಬರುವ ಪತ್ರಕ್ಕಾಗಿ ಕಾಯತೊಡಗುತ್ತಾನೆ. ಬಯಸದೇ ಇದ್ದಕಡೆಯಿಂದ ಬರುವ ನಂಬಿಕೆ ಹಾಗೂ ಪ್ರೀತಿಯಿಂದ  ಹೊಸ ಕನಸಿಗಳೆಡೆಗೆ ಹೆಜ್ಜೆ ಹಾಕುತ್ತಾನೆ.
''ತನಗೆ ವಯಸ್ಸಾಗಿದೆ'' ಅನ್ನುವ ವಾಸ್ತವದ ಅರಿವು ತನಗೆ ಉಂಟಾಗುವುದಕ್ಕೂ ಅವಕಾಶವಿಲ್ಲದಷ್ಟು ನಗರ ಜೀವನ  ವ್ಯಕ್ತಿಯನ್ನು  ಬ್ಯಸಿಯಾಗಿಟ್ಟಿರುತ್ತದೆ. ಆ ವಾಸ್ತವದ ಅರಿವಿನಿಂದ ಕಂಗಾಲಾಗುವ ನಾಯಕ ಒಮ್ಮಲೇ ಹೊಸದಾರಿಯತ್ತ ಹೊರಡುತ್ತಾನೆ.

ಮೇಲಿನ ಮನೆಯಲ್ಲಿನ ಹಿರಿಯ ಮಹಿಳೆಯಿಂದ ಹೊಸರುಚಿ ಅಡಿಗೆಗಳನ್ನು ಕಲಿತು ತನ್ನ ಗಂಡನ ಮನಸ್ಸು ಗೆಲ್ಲಲು ಹೊರಡುವ ನಾಯಕಿ ತನ್ನ ದಾಂಪತ್ಯ ಮುರಿದುಬಿದ್ದಿರುವುದನ್ನು ಒಪ್ಪಿಕೊಂಡಂತೆ ಕಂಡುಬರುತ್ತಾಳೆ. ತನ್ನ ತಾಯಿಯ ಆರ್ಥಿಕ ಸಂಕಷ್ಟ, ತಂದೆಯ ಅನಾರೋಗ್ಯ, ನಿರ್ಲಕ್ಷಿಸುವ ಗಂಡನಿಂದ ಏಕತಾನತೆಗೆ ಬಿದ್ದಂತಿರುವ ನಾಯಕಿ.. ಆಧುನಿಕ ನಗರಜೀವನದ ಕನ್ನಡಿಯಾಗಿ ನಿಲ್ಲುತ್ತಾಳೆ. things are not that bad as they seems to be ಎನ್ನುವ ಒಂದು ಸಾಂತ್ವನ ನಾಯಕ ನಾಯಕಿಗೆ ಹೇಳಿದ್ದರೂ ಅದು ಒಂದಿಡೀ ಸಮೂಹಕ್ಕೆ ಹೇಳಿದಂತೆ ಧ್ವನಿಸುತ್ತದೆ. ಕಷ್ಟಗಳೆಡೆಗಿನ ನಮ್ಮ ದೃಷ್ಟಿಕೋನದ ವಕ್ರತೆ ಸರಿ ಮಾಡಿಕೊಂಡಲ್ಲಿ ಎಲ್ಲವೂ ಸರಿಯಾಗಿ ಕಾಣಬಹುದು.

ಆಧುನಿಕ ವಿಜ್ಞಾನ ಮನುಷ್ಯನ ಜೋಳಿಗೆಗೆ ಸೌಲಭ್ಯಗಳ ರಾಶಿಯನ್ನೇ ತಂದು ಹಾಕುತ್ತಿದೆ. ಅವುಗಳಲ್ಲಿ ವೈದ್ಯಕೀಯ ಸಲಕರಣೆ-ಸೌಲಭ್ಯಗಳಂತೂ ಅತಿ ಮುಖ್ಯವಾದವುಗಳು. ಈ ವೈದ್ಯಕೀಯ ಸೌಲಭ್ಯಗಳು ಮನುಷ್ಯನ ವೈಯಕ್ತಿಕ ಜೀವನದಲ್ಲಿ ಸಂತೋಷವನ್ನು ತುಂಬುವುದರಲ್ಲಿ ಯಾವುದೇ ಆಸಕ್ತಿಯನ್ನು ಹೊಂದಿರುವುದಿಲ್ಲ. ಕೇವಲ ರೋಗದ ಶುಷ್ರೂಷೆಯಷ್ಟೇ ಅವುಗಳ ಅಂತಿಮ ಉದ್ದೇಶ. ಇಂತ ಚಿಕಿತ್ಸಾ ವಿಧಾನಗಳು ಸತ್ತುಹೋದಬೇಕಾದ ಅನೇಕ ಜೀವಗಳನ್ನು ಉಳಿಸಿ ಮನುಷ್ಯರ ಆಯುಸ್ಸನ್ನು ದೀರ್ಘಗೊಳಿಸುತ್ತಿವೆ. ಆದರೆ ''ಜೀವನ'' ಮುಗಿದು ಹೋದ ಜೀವಗಳು ದೇಹವನ್ನು ಬಿಡದೇ ಹೋದಾಗ ಆ ದೇಹದ ಆರೈಕೆಯ ಸಲುವಾಗಿ ಬಲಿಯಾಗುವ, ತಮ್ಮ ಜೀವನನ್ನು ಕಳೆದುಕೊಳ್ಳುವ ಎರಡು ಜೀವಗಳು ಈ ಕಥೆಯಲ್ಲಿನ ಮತ್ತೊಂದು ಮಗ್ಗಲು. ಆ ಎರಡೂ ಜೀವ ಗಳು ಎತ್ತುವ ಪ್ರಶ್ನೆಗಳು ಕಾನೂನಿನ ದೃಷ್ಟಿಯಲ್ಲಿ ತಪ್ಪಾಗಿ ಕಂಡರೂ  ಜೀವ ಸಂರಕ್ಷಿಸುವ ಆಧುನಿಕ ಶುಷ್ರೂಷಾ ವಿಧಾನಗಳು ಉಂಟುಮಾಡುವ ಸಂದಿಗ್ಧತೆ-ಧರ್ಮಸಂಕಟ ಆಧುನಿಕ ಮಹಾನಗರದ ಜೀವನದ ಮತ್ತೊಂದು ಮುಖ.
ಹೀಗೆ ನಗರ ಜೀವನದ ತಲ್ಲಣಗಳನ್ನು ತೆರೆದಿಡುವ ಈ ಚಿತ್ರ ಅಲ್ಲಲ್ಲಿ ಹಾಸ್ಯದ ಹೊನಲ್ಲನ್ನು ಹರಿಸುತ್ತದೆ. ನಾಯಕ ಊಟದ ಡಬ್ಬಿಯ ಬರುವಿಕೆಗೆ ಕಾಯುವ ದೃಶ್ಯಗಳಲ್ಲಿ ಪ್ರೇಕ್ಷಕ ಕೂಡ ನಾಯಕನಿಗಿಂತ ಉತ್ಸುಕತೆಯಿಂದ ಕಾಯುತ್ತಾನೆ. ನಾಯಕಿ ಪತ್ರ ಓದುತ್ತಾ ನಗುವಾಗ ಪ್ರೇಕ್ಷಕ ಕೂಡ ಅವಳ ಸಂತೋಷದಲ್ಲಿ ಭಾಗಿಯಾಗುತ್ತಾನೆ.  ಹೀಗೆ ಪ್ರೇಕ್ಷಕನನ್ನು ಕಟ್ಟಿಹಾಕಿ ತನ್ನ ಜೊತೆಗೇ ಸೆಳೆದುಕೊಂಡು ಹೋಗುವ ಕಥೆ ಆಳಕ್ಕಿಳಿದಷ್ಟೂ ತನ್ನ ತೀವ್ರತೆಯನ್ನು ಹೆಚ್ಚಿಸುತ್ತ ಹೋಗುತ್ತದೆ.
ಇರ್ಫಾನ್ ಖಾನ್ ತನ್ನ ವಯಸ್ಸಿಗಿಂತ ಹಿರಿಯನಾದ ಸರ್ಕಾರೀ ಕಛೇರಿಯ ಪಾತ್ರದಲ್ಲಿ ಒದಗಿಕೊಂಡಿರುವ ರೀತಿ, ನೈಜ ಧ್ವನಿಮುದ್ರಣ, ಶಾರ್ಪ್ ಆದ ಕ್ಯಾಮೆರಾ ಆಂಗಲ್ ಗಳಿಂದಾಗಿ ಪ್ರೇಕ್ಷಕನಿಗೆ ಸಿನೆಮಾ ನೋಡುತ್ತಿದ್ದೇವೆ ಅನ್ನುವ ಭಾವ ಹೊರಟು ಹೋಗಿ ನಿಜವಾಗಿಯೂ ಈ ಘಟನೆಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ ಎನ್ನುವ ಭಾವ ಮೂಡಿಸುವಲ್ಲಿ ಚಿತ್ರ ಯಶಸ್ವಿಯಾಗುತ್ತದೆ.
ನವಾಜುದ್ದಿನ್ ಸಿದ್ದಿಕಿ, ನಿಮೀತ್ ಕೌರ್ ಇಬ್ಬರೂ ಇರ್ಫಾನ್ ಖಾನ್ ಗೆ ಪೈಪೋಟಿ ನೀಡಿ ತಮ್ಮ ತಮ್ಮ ಪಾತ್ರಗಳನ್ನು ಜೀವಿಸಿದ್ದಾರೆ.
watch 'lunch box' on your own risk..you can fall in love for irfan's performance...
ಈ ಸಿನೆಮಾ ನೋಡಿದ ಮೇಲೆ ನನ್ನ ಸ್ನೇಹಿತೆಯೊಬ್ಬಳು ಹೇಳಿದ ಈ ಮಾತು ಈ ಚಿತ್ರದ one line ವಿಮರ್ಷೆಯೆಂದರೆ ಅತಿಶಯೋಕ್ತಿ ಏನಲ್ಲ.

Saturday, July 6, 2013

''ಲೂಟೆರಾ''

ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ಉಡಾನ್ ಚಿತ್ರವನ್ನು ನೋಡಿದ ಮೇಲೆ ಆ ನಿರ್ದೇಶಕನ ಮುಂದಿನ ಚಿತ್ರ ಯಾವಾಗ ಬರುತ್ತದೆ ಅಂತ ನಾನು ಕಾಯುತ್ತಿದ್ದೆ. ಆದರೆ ಅಂತಹ ಯಾವುದೇ ಸುದ್ದಿಗಳು ಬರದೇ ಹೋದಾಗ ನಿರಾಶನಾಗಿದ್ದೆ. ಎರಡು ತಿಂಗಳುಗಳ ಹಿಂದೆ ''ಲೂಟೆರಾ'' ಎಂಬ ಚಿತ್ರದ ತುಣುಕು ಕಣ್ಣಿಗೆ ಬಿದ್ದಾಗಲೂ ಕೂಡ ಅದರ ಕಡೆಗೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಏಕೆಂದರೆ ಆ ವೀಡಿಯೊ ಟ್ರೈಲರ್ ನಲ್ಲಿದ್ದದ್ದು ರಣವೀರ್ ಸಿಂಗ್ ಮತ್ತು ಸೋನಾಕ್ಷಿ ಸಿನ್ಹಾ. ಈ ರಣವೀರ್ ಸಿಂಗ್ YRF ಬ್ಯಾನರಿನ ''ಬ್ಯಾಂಡ್ ಬಾಜಾ ಬಾರಾತ್, ನಂತಹ rom-com ಮಸಾಲಾ ಚಿತ್ರದ ಮೂಲಕ ಎಂಟ್ರಿ ಪಡೆದು ಅಂಥದ್ದೇ ಮತ್ತೊಂದು ಚಿತ್ರ ಮಾಡಿದ್ದ. ಇನ್ನು ಈ ಸೋನಾಕ್ಷಿ ದಬಾಂಗ್ ಮೂಲಕ ಬೆಳಕಿಗೆ ಬಂದು ಪ್ರಭುದೇವಾ, ಸಲ್ಮಾನ್ ಖಾನ್ ಮತ್ತು ಅಕ್ಷಯ್ ಜೊತೆ ಥೈಯಾ-ಥಕ ಕುಣಿಯುತ್ತಿದ್ದ ಧಡೂತಿ ಸುಂದರಿ. ಇವರಿಬ್ಬರೂ ಗಾಡ್ ಫಾದರ್ ಗಳ ನೆಲೆಯಲ್ಲಿದ್ದವರು ಮತ್ತು ಮಸಾಲಾ ಚಿತ್ರಗಳ ಮಾರ್ಕೆಟ್ಟಿನಲ್ಲಿ ಬಂದ ಹೊಸ ಕುದುರೆಗಳು. ಹೀಗಾಗಿ ಆ ಟ್ರೈಲರ್ ಅನ್ನು ಸರಿಯಾಗಿ ಗಮನಿಸಲೂ ಇಲ್ಲ. ಆದರೆ ಹದಿನೈದು ದಿನಗಳ ಹಿಂದೆ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಬಗ್ಗೆ ಓದುತ್ತಿದ್ದಾಗ ಅಚಾನಕ್ಕಾಗಿ ''ಲೂಟೆರಾ'' ಚಿತ್ರವನ್ನು ವಿಕ್ರಮಾದಿತ್ಯ ಮೊತ್ವಾನೆ ನಿರ್ದೆಶಿಸಿದ್ದಾನೆ ಅಂತ ತಿಳಿಯಿತು. ಬಿಡುಗಡೆಯಾದ ಮೊದಲ ದಿನವೇ ಎಲ್ಲ ಕೆಲಸ ಬದಿಗೊತ್ತಿ ಚಿತ್ರ ನೊಡಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ''ಉಡಾನ್'' ನೋಡಿದಾಗ ಆದಷ್ಟು ಖುಷಿ ಖಂಡಿತ ಆಗಲಿಲ್ಲ. ಆದರೆ ಬೇಸರ ಕೂಡ ಆಗಲಿಲ್ಲ.


ಈ ಚಿತ್ರ ಬಿಡುಗಡೆಯಾಗುವ ಮುಂಚೆ ಸೋನಾಕ್ಷಿ ಮತ್ತು ರಣವೀರ್ ಇಬ್ಬರದ್ದು unusual pair ಅನ್ನುವ ಕಾರಣಕ್ಕೆ ಅನೇಕರು ಈ ಚಿತ್ರದ ಬಗ್ಗೆ ಕುತೂಹಲ ಹೊಂದಿದ್ದರೂ ಕೂಡ ಬಾಲಿವುಡ್ ನ ಟಿಪಿಕಲ್ ಮಸಲಾ ಬ್ರಾಂಡಿನ, ಹಾಗೂ ಮಾರ್ಕೆಟ್ಟಿನ ಓಡುವ ಕುದುರೆಗಳಾದ ಇವರಿಬ್ಬರೂ ಇಂತಹ ಚಿತ್ರದಲ್ಲಿ ನಟಿಸುತ್ತಾರೆ ಅನ್ನುವ ಕಲ್ಪನೆಯೂ ಇಂಡಸ್ಟ್ರಿ ಗೆ ಇರಲಿಲ್ಲ. ಚಿತ್ರದ ಬಿಡುಗಡೆಯ ನಂತರ ಒಂದೊಂದಾಗಿ ಎಲ್ಲಾ ಅಭಿಪ್ರಾಯಗಳು ಹೊರಬರುತ್ತಿವೆ. ಯಾಕೆಂದರೆ ಯಾವುದೇ ದೃಷ್ಟಿಕೋನದಿಂದಲೂ ಇದೊಂದು ಬಾಲಿವುಡ್ ನ ಸೂತ್ರಗಳ ಸಿನೆಮಾ ಅಲ್ಲ. ಆದರೆ ಬಾಲಿವುಡ್ ನ ಮೇನ್ ಸ್ಟ್ರೀಮ್ ನ ಮಸಾಲಾ ಮೂಲಕ ಗುರುತಿಸಿಕೊಂಡ ಕಲಾವಿದರು ಮುಖ್ಯ ಪಾತ್ರಗಳಲ್ಲಿ ಇದ್ದಾರೆ. ಸ್ಟಾರ್ ಪ್ಲಸ್ ನ ಸೀರಿಯಲ್ ಗಳ ನಿರ್ಮಾಪಕಿ ಏಕ್ತಾ ಕಪೂರಳ ಬಾಲಾಜಿ ಸಂಸ್ಥೆ ಇದರು ನಿರ್ಮಾಣ ಮಾಡಿದೆ. ಮೊದಲು ಸಂಜಯ್ ಲೀಲಾ ಭನ್ಸಾಲಿ ಜೊತೆ ಕೆಲಸ ಮಾಡಿದ್ದರೂ ಕೂಡ, ಅನುರಾಗ್ ಕಶ್ಯಪ್ ಜೊತೆ ಗುರುತಿಸಿಕೊಂಡ ನಿರ್ದೇಶಕ ಈ ವಿಕ್ರಮ್. ಹೀಗಾಗಿ ಎಲ್ಲ ಕಡೆಯಿಂದ ಒಂದಕ್ಕೊಂದು ತಾಳೆಯಾಗದ ಕಾಂಬಿನೇಶನ್ ಗಳು ಈ ಚಿತ್ರದಲ್ಲಿ ಕೆಲಸ ಮಾಡಿವೆ ಎಂದರೆ ತಪ್ಪಾಗಲಾರದು. ಬಾಲಿವುಡ್ ನಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಈ ತಾಳೆಯಾಗದ ಕಾಂಬಿನೇಶನ್ ಗಳು ಸ್ಪಷ್ಟವಾಗಿ ಕನ್ನಡಿ ಹಿಡಿಯುತ್ತವೆ. ನಟ ನಟಿ ನಿರ್ಮಾಪಕ ನಿರ್ದೇಶಕ ಮುಂತಾದ ಎಲ್ಲರಲ್ಲಿಯೂ ತಮ್ಮ ಬೌಂಡರಿಗಳನ್ನು ಮೀರಿ ತಮ್ಮನ್ನು ಸಾಬೀತು ಪಡಿಸುವ, ಹೊಸತನ್ನು ಮಾಡುವ ಉಮೆದಿ ಕಂಡುಬರುತ್ತಿದೆ. ಇಲ್ಲವಾದರೆ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ನಟಿಸುತ್ತ ಅಪ್ಪನ ನೆರಳಲ್ಲಿ ಬೆಳೆಯುತ್ತಿರುವ ಸೋನಾಕ್ಷಿ ಸಿನ್ಹಾಗೆ ಈ ಚಿತ್ರದಲ್ಲಿ ಮೇಕಪ್ ಇಲ್ಲದ ಹಾಗೂ ಅಸ್ಥಮಾ ರೋಗಿಯ ಪಾತ್ರವನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಖಂಡಿತ ಇರಲಿಲ್ಲ. ನಿರ್ದೇಶಕ ವಿಕ್ರಮಾದಿತ್ಯ ಮೊತ್ವಾನೆ ಗೆ ಅನುರಾಗ್ ಕಶ್ಯಪ್ ನಂತಹ ಆಪ್ತ ಗೆಳೆಯನನ್ನು ಬಿಟ್ಟು ಬಲಾಜಿಯಂತಹ ಸಂಸ್ಥೆ ಗೆ ಚಿತ್ರ ಮಾಡಿಕೊಡುವ ಅಗತ್ಯವೂ ಇರಲಿಲ್ಲ. ಮತ್ತು ಏಕ್ತಾ ಕಪೂರ್ ಗೆ ಇಂತಹ ನಿರ್ದೇಶಕರ ಅವಶ್ಯಕತೆಯೂ ಇರಲಿಲ್ಲ. ತಮ್ಮ ಕಂಫರ್ಟ್ ಝೋನ್ ಗಳಿಂದ ಹೊರಬಂದು ಉತ್ತಮವಾದದ್ದನ್ನು ಮಾಡಬಯಸುವ ಮನಸುಗಳಿಂದ ಈ ತರಹದ ಚಿತ್ರಗಳು ಸಾಧ್ಯ. ಅದು ಬಾಲಿವುಡ್ ನಲ್ಲಿ ನಡೆಯುತ್ತಿರುವುದು ಬಹಳ ಸಂತೋಷ ಪಡುವ ವಿಚಾರ.

ಇಂತಹ ಹೊಸಗಾಳಿಯ ಸೂಚನೆಯ ''ಲೂಟೆರಾ'' ಚಿತ್ರದ ಹೆಸರು ''ಡಕಾಯಿತ'' ಎನುವ ಅರ್ಥದೊಂದಿಗೆ ತನ್ನ ವಿಕ್ಷಿಪ್ತತೆಗೆ ನಾಂದಿ ಹಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಇಂತಹ ಹೆಸರು ಕೂಡ unusual ಅನಿಸುವಂಥದ್ದು.
O. Henry's ಅವರ 'The Last Leaf' ಎಂಬ ಕಿರುಗತೆ ಈ ಚಿತ್ರಕ್ಕೆ ಪ್ರೇರಣೆ. ಆದರೆ ಆ ಕಥೆಯನ್ನು ಪೂರ್ತಿಯಾಗಿ ಕಾಪಿ ಹೊಡೆಯದೇ, 1953-54 ರ ಕಾಲಘಟ್ಟದ ಭಾರತದ ಜಮೀನ್ದಾರಿ ಯುಗದ ಅಂತ್ಯವಾಗುವ ಸಮಯದಲ್ಲಿ ನಡೆಯುವ ಘಟನೆಗಳ ಮೂಲಕ ಸುಂದರ ಕಥೆಯೊಂದನು ಚಿತ್ರಿಸಿ ಕೊಟ್ಟಿದ್ದಾನೆ ನಿರ್ದೇಶಕ. ಹೇಳಿಕೊಳ್ಳುವಂಥ ಅದ್ಭುತ ಕಥೆಯೇನಲ್ಲ. ಅಮೀರ್ ಖಾನ್ ನಟಿಸಿದ ''ಫನಾ'' ಚಿತ್ರದ ಕಥೆಗೂ ಇದಕ್ಕೂ ಬಹಳಷ್ಟು ಹೊಲಿಕೆಗಳಿವೆ. ಚಿತ್ರಕಥೆಯೂ ತುಂಬಾ ನಿಧಾನವಾಗಿ ಸಾಗುತ್ತದೆ. ಆದರೆ ಚಿತ್ರದ ಛಾಯಾಗ್ರಹಣ, ವಸ್ತ್ರ ವಿನ್ಯಾಸ, ಕಲಾ ನಿರ್ದೆಶನ ಮುಂತಾದ ಎಲ್ಲ ಅಂಶಗಳು ಹಾಗೂ ಪಾತ್ರಗಳು ಅದ್ಭುತವಾಗಿ ಒಂದಕ್ಕೊಂದು ಹೊಂದಿಕೊಂಡು ನೋಡುಗರನ್ನು 1953-54 ರ ಪಶ್ಚಿಮ ಬಂಗಾಳದ ಮಾಣಿಕ್ ಪುರ ಎಂಬ ಹಳ್ಳಿಗೆ ಕರೆದುಕೊಂಡು ಹೊಗಿಬಿಡುತ್ತವೆ. ದೇವದಾಸ್ ಚಿತ್ರದ ದ್ವನಿಗ್ರಹಣ ವಿಭಾಗದಲಿ ಕೆಲಸ ಮಾಡಿ ಪ್ರಶಸ್ತಿ ಪಡೆದಿದ್ದ ವಿಕ್ರಮ್ ಈ ಚಿತ್ರದ ನಿರ್ದೇಶಕನಾಗಿರುವುದರಿಂದ ಸೌಂಡ್ ಗೆ ವಿಶೇಷ ಮಹತ್ವ ಕೊಡಲಾಗಿದೆ. ''ಕಥೆಯಲ್ಲಿ ಮುಂದೇನಾಗ್ತದೆ?'' ಅಂತಷ್ಟೇ ತಿಳಿದುಕೊಳ್ಳುವುದಕ್ಕಾಗಿ ಸಿನೆಮಾ ನೋಡುವವರಿಗೆ ಇದು ಇಷ್ಟವಾಗಲಿಕ್ಕಿಲ್ಲ. ಏಕೆಂದರೆ ಕಥೆ ಬಹಳ ಸರಳ ಮತ್ತು ಚಿಕ್ಕದಾಗಿದೆ. ಆದರೆ ಅದನ್ನು ಪ್ರಸ್ತುತಪಡಿಸುವಾಗಿನ ಕೆಲಸದ ಗುಣಮಟ್ಟ ಪ್ರೇಕ್ಷಕರಿಗೆ ಒಂದೊಳ್ಳೆಯ ಸಿನೆಮಾಟಿಕ್ ಅನುಭವವನ್ನು ಕೊಡುತ್ತದೆ. ಚಿತ್ರದ ಮೊದಲ ಒಂದು ಘಂಟೆ ಕಾಲ ನಾಯಕನ ಮೂಲ ವೃತ್ತಿ, ಉದ್ದೇಶ ಮುಂತಾದವುಗಳು ಎಲ್ಲಿಯೂ ಬಯಲಾಗದೆ ಒಂದು ಸರಳ ಸುಂದರ ಪ್ರೇಮ ಕಥೆಯಂತೆ ಸರಾಗಿವಾಗಿ ಸಾಗುವ ಚಿತ್ರ ಒಮ್ಮೆಲೇ ಉಸಿರು ಬಿಗಿ ಹಿಡಿದು ನೋಡುವಷ್ಟು ತೀವ್ರವಾಗಿ ಬದಲಾಗುತ್ತದೆ. ವಿರಾಮದ ನಂತರ ಬಂಗಾಳದಿಂದ ಕಾಶೀರಕ್ಕೆ ಬರುವ ಕಥೆ ಒಂದು ಹಂತದಲ್ಲಿ ಬೋರ್ ಅನಿಸುತ್ತದೆ. ಅಂತ್ಯ ಸ್ವಲ್ಪ ಸುದೀರ್ಘ ಅನಿಸಿದರೂ ಕೊನೆಯ ಎರಡು ನಿಮಿಷಗಳಲ್ಲಿ ಎಲ್ಲ ಬೇಸರ ಮರೆಸುವ ದ್ರುಶ್ಯಗಳಿವೆ. ಇದು ನೂರು ಕೋಟಿ ಗಳಿಸುವ ಬಾಲಿವುಡ್ ಸಿನೆಮಾ ಅಲ್ಲ. ವೀಕೆಂಡ್ ನಲ್ಲಿ ಸುಮ್ಮನೆ ಸಿನೆಮಾ ನೋಡುವವರಿಗಾಗಿ ಇದು ಅಲ್ಲವೇ ಅಲ್ಲ. ಅಪರೂಪದ ಸಿನೆಮಾಗಳನ್ನು ನೋಡಿ ಆನಂದಿಸುವ ಸಹೃದಯರು ತಪ್ಪದೆ ನೋಡಬೇಕಾದ ಚಿತ್ರ. ರಣವೀರ್ ಮತ್ತು ಸೋನಾಕ್ಷಿ ಜೊತೆಗೆ ಎಷ್ಟು ಕ್ಯೂಟ್ ಆಗಿ ಕಾಣ್ತಾರೆ ಅಂತ ನೋಡುವ ಆಸೆಯಿಂದ ಬಂದಿದ್ದ ಒಂದಿಪ್ಪತ್ತು ಜನ ಹುಡುಗಿಯರ ಹಿಂಡು ಥೇಟರ್ ನಲ್ಲಿ ನನ್ನ ಹಿಂದಿನ ಸಾಲಿನಲ್ಲಿ ಕುಳಿತಿತ್ತು . ಚಿತ್ರ ನೋಡಿ ಅವರಿಗೆಲ್ಲ ನಿರಾಸೆ ಆಗಿತ್ತು. ಸೂ ಸ್ಯಾಡ್ ಯಾರ್ .. ಅಂತ ಗೊಣಗುತ್ತಿದ್ದರು. ಹೀಗೆ ಪಡ್ಡೆ ಅಭಿಮಾನಿಗಳಿಗೆ ನಿರಾಸೆ ಮಾಡಿದರೂ ಕೂಡ   ರಣವೀರ್ ಮತ್ತು ಸೋನಾಕ್ಷಿ ಇಬ್ಬರಿಗೂ ಈ ಚಿತ್ರ ಒಂದು ಮಟ್ಟದ ಗೌರವ ಮತ್ತು ಕೀರ್ತಿಯನು ತಂದು ಕೊಟ್ಟಿದೆ. ಅಷ್ಟು ಅದ್ಭುತವಾಗಿ ಇಬ್ಬರೂ ನಟಿಸಿದ್ದಾರೆ. ಚಿತ್ರದ ಸಂಗೀತದಲ್ಲಿ ಪಕ್ಕಾ ಬೆಂಗಾಲಿ ಫ್ಲೇವರ್ ಇದೆ. ಹಿನ್ನೆಲೆ ಸಂಗೀತವಂತೂ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಹಿನ್ನೆಲೆ ಸಂಗೀತವನ್ನು ಕಥೆ ಹೇಳುವ ತಂತ್ರಗಾರಿಕೆಯಲ್ಲಿ ಹೇಗೆ ಬಳಸಬೇಕು ಮತ್ತು ''ಮೌನ'' ವನ್ನು ಸಿನೆಮಾದಲ್ಲಿ ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಬೇಕು ಎಂಬುದನ್ನು ಈ ಚಿತ್ರ ನೋಡಿ ಕಲಿಯಬಹುದು. ಅಷ್ಟು ಸೊಗಸಾಗಿದೆ.

ಮುಝೆ ಛೊಡ್ ದೋ
ಮೇರೆ ಹಾಲ್ ಪೆ
ಜಿಂದಾ ಹ್ಞೂ ಯಾರ್
ಕಾಫೀ ಹೈ

ಕುಛ್ ಮಾಂಗನಾ
ಬಾಕೀ ನಹೀ
ಜೋ ಭೀ ಮಿಲಾ ಕಾಫೀ ಹೈ
ಅಮಿತಾಭ್ ಭಟ್ಟಾಚಾರ್ಯ ಬರೆದ ಇಂತಹ ಸಾಲುಗಳು ಮತ್ತೆ ಮತ್ತೆ ಕಾಡುವಂತಿವೆ

ದೇವಾನಂದ್ ಚಿತ್ರಗಳು ಮತ್ತು ಆ ಕಾಲದ ಹೀರೋಯಿಸಂ ಸನ್ನಿವೇಶಗಳಲ್ಲಿ ಸೊಗಸಾಗಿ ಹೊಸೆಯಲಾಗಿದೆ. ಹಿನ್ನೆಲೆಯಲ್ಲಿ ಬರುವ ಗುರುದತ್ ಅವರ ಮೊದಲ ಚಿತ್ರದ ಹಾಡು ಮತ್ತು ಅವರ ಚಿತ್ರದ ವಿಲನ್ ಪಾತ್ರದ ಪಿ ಕೆ ಸಿಂಗ್ ಎಂಬ ಹೆಸರನ್ನು ಇಲ್ಲಿಯ ಪೋಲೀಸ್ ಅಧಿಕಾರಿಗೆ ಇಡುವ ಮೂಲಕ ವಿಕ್ರಮ್ ಆ ಮೇರು ಕಲಾವಿದರಿಗೆ ಗೌರವ ಸಲ್ಲಿಸಿದ್ದಾರೆ.

ಸತ್ಯಜಿತ್ ರೆ ಅವರ ''ಸೀಮಾಬದ್ಧ'' ಚಿತ್ರದಲ್ಲಿ ನಟಿಸಿದ್ದ ಬೆಂಗಾಲಿ ಲೇಖಕ ಮತ್ತು ನಟ ''ಬರುಣ್ ಚಂದಾ'' ಇಲ್ಲಿ ಮಗಳನ್ನು ತನ್ನ ಜೀವದಂತೆ ಪ್ರೀತಿಸುವ ಮತ್ತು ಜಮೀನ್ದಾರಿಕೆ ಯನ್ನು ಕಳೆದುಕೊಂಡು ಕಂಗಾಲಾಗುವ ಬಂಗಾಳದ ಪುಡಿರಾಜನ ಪಾತ್ರದಲ್ಲಿ ತಮ್ಮ ಖಣ ಖಣಿಸುವ ದ್ವನಿಯೊಂದಿಗೆ ಮರೆಯಲಾಗದ ಪ್ರಭಾವ ಬೀರುತ್ತಾರೆ. ''ಅಂಗ್ರೆಜೊಂ ಸೆ ದೇಶ್ ಆಝಾದ್ ಹುವಾ, ಮಗರ್ ಹಮ್ ಬರ್ಬಾದ್ ಹೊ ಗಯೇ'' ಅನ್ನುವ ಮಾತನ್ನು ನೀವು ಅವರ ಧ್ವನಿಯಲ್ಲೇ ಕೇಳಬೇಕು.

Saturday, June 8, 2013

ಸೂರಿಯ ದುನಿಯಾದಲ್ಲಿ

''ದುನಿಯಾ'' ಚಿತ್ರದ ಮೂಲಕ ಬೆಂಗಳೂರಿನಲ್ಲೇ ಇರುವ ಮತ್ತೊಂದು ವಿಕ್ಷಿಪ್ತವಾದ ಲೋಕದ ದರ್ಶನ ಮಾಡಿಸಿ ಸಂಭಾಷಣೆಯ ಮೂಲಕ ಕಚಗುಳಿಯಿಡುತ್ತ ಗಂಭೀರವಾದ ಮಾತುಗಳನ್ನು ಅಷ್ಟೇನೂ ಗಂಭೀರವಲ್ಲದ ಶೈಲಿಯಲ್ಲಿ ಹೇಳುತ್ತಾ ಸೂರಿ ತಮ್ಮ ''ದುನಿಯಾ''  ತೊರಿಸಿದರು. ಅವತ್ತು ಅವರ ಜೊತೆಗಿದ್ದ ಸತ್ಯ ಹೆಗಡೆ ಆ ದುನಿಯಾಗೆ ಕಣ್ಣಾಗಿದ್ದರು. ಅದೇ ಸಮಯದಲ್ಲಿ ಬೀಳುತ್ತಿದ್ದ ಮುಂಗಾರು ಮಳೆಯ ಆರ್ಭಟದಲ್ಲೂ  ಸೂರಿಯ ಸೂಕ್ಷ್ಮತೆಯು ಜನರ ಮನಸು ತಟ್ಟಿದ್ದು ಮತ್ತು ಕಾಡಿದ್ದು ಸಾಮಾನ್ಯ ಸಾಧನೆಯೇನಲ್ಲ. ಅದು ಸೂರಿಯವರ  ತಾಕತ್ತಿಗೆ ಹಿಡಿದ ಕನ್ನಡಿ. ಇಂತಹ ಅಪರೂಪದ ಸೂರಿ ತಮ್ಮನ ಎರಡನೇ ಚಿತ್ರದಲ್ಲಿ ಪ್ರೇಕ್ಷಕರ ನಿರೀಕ್ಷೆಗೆ ಸೊಪ್ಪು ಹಾಕದೇ  ತಮ್ಮನ್ನು ವೈಯಕ್ತಿಕವಾಗಿ ಕಾಡಿದ  self destruction ನ ಕಥೆಯೊಂದನ್ನು ಸುಂದರ ಕಾವ್ಯದಂತೆ ತಮ್ಮೆಲ್ಲ ಕಲಾತ್ಮಕ ತೀವ್ರತೆಯೊಂದಿಗೆ ತೆರೆಯ ಮೇಲೆ ಬರೆದರು. ''ಇಂತಿ ನಿನ್ನ ಪ್ರೀತಿಯ''ಎನ್ನುವ ಆ ದೃಶ್ಯಕಾವ್ಯ ಸಿನೆಮಾದ ವ್ಯಾಪಾರಿಕ ಚೌಕಟ್ಟುಗಳನ್ನು ಮೀರಿತ್ತು, ಮತ್ತು ಸಾಮಾನ್ಯ ಪ್ರೇಕ್ಷಕರಿಗೆ ನಿಲುಕದ ಧ್ವನಿಯೊಂದನ್ನು ಒಡಲಾಳದಲ್ಲಿ ಹೊಂದಿತ್ತು. ಅದರ ವ್ಯಾಪಾರಿಕ ಸೋಲಿನಿಂದ ಬಹುಶಃ ಕಂಗಾಲಾದ ಸೂರಿ, ನಂತರದ ಮೂರೂ  ಚಿತ್ರಗಳಲ್ಲಿ ಸ್ಟಾರ್ ನಿರ್ಮಾಪಕ ಮತ್ತು ಸ್ಟಾರ್ ನಟರನ್ನು ಅವಲಂಬಿಸಿಬಿಟ್ಟರು. ಅತ್ತ ಕಡೆ ಅವು ಆ ಸ್ಟಾರ್ ನಟರ ಚಿತ್ರಗಳಂತೆಯೂ ಇರದೇ, ಇತ್ತ ಕಡೆ ಅಪ್ಪಟ ಸೂರಿಯ ಚಿತ್ರಗಳಂತೆಯೂ ಇರದೇ ದಿಕ್ಕುತಪ್ಪಿದ ಕುದುರೆಯ ಓಟದಂತೆ ಧೂಳೆಬ್ಬಿಸಿ ಹೊರಟು  ಹೊದವು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ''ಜಂಗ್ಲೀ'' ಯಲ್ಲಿ ಸುಪರ್ ಹಿಟ್ ಹಾಡುಗಳ ಹೊರತಾಗಿ ನೆನಪುಳಿವಂಥದ್ದು ಎನೂ ಇರಲಿಲ್ಲ. ರಾಜ್ ಕುಟುಂಬದ ನಿರ್ಮಾಣದ ''ಜಾಕೀ'' ಚಿತ್ರ  ಜನಪ್ರಿಯ ಸಂಗೀತ ಮತ್ತು ಪುನೀತ್ ತಾರಾಮೌಲ್ಯದ ಸಹಕಾರದಿಂದ ಹಿಟ್ ಚಿತ್ರ ಎನಿಸಿಕೊಂಡರೂ ಅಣ್ಣಾಬಾಂಡ್ ಅಘಾತಕಾರಿಯಾಗಿತ್ತು. ಆದರೆ ಈ ಎಲ್ಲ ಚಿತ್ರಗಳಲ್ಲಿ ಸೂರಿಯವರ  ತಂಡ ಛಾಯಾಗ್ರಹಣ, ಸಂಗೀತ, ಸಾಹಸ ಸಂಯೋಜನೆ  ಮುಂತಾದ ತಾಂತ್ರಿಕ ಅಂಶಗಳಲ್ಲಿ ಮೇಲೇರುತ್ತಾ ಸಾಗಿದ್ದು ಸುಳ್ಳಲ್ಲ. ಜಾಕೀ ಚಿತ್ರದ ಫೈಟ್ ಗಳಂತೂ ರೊಮಾಂಚಕ. ಸತ್ಯ ಹೆಗಡೆಯಂತಹ ದೈತ್ಯ ಪ್ರತಿಭೆ ಹೊರಬರಲು ಸೂರಿಯೇ ಕಾರಣ.


ಇದೀಗ ಸೂರಿ ಉಳಿದ ಅನೇಕ ನಿರ್ದೇಶಕರುಗಳಂತೆ ''ಹಾಗೆ ಮಾಡಿದೀವಿ''  ''ಹೀಗೆ ಮಾಡಿದೀವಿ'' ಅಂತೇನೂ ಹೆಚ್ಚು ಕೊಚ್ಚಿಕೊಳ್ಳದೇ ಸದ್ದಿಲ್ಲದೇ ಕೆಲಸ ಮುಗಿಸಿ ''ಕಡ್ಡಿಪುಡಿ''ಯನ್ನು ಮಾರ್ಕೆಟ್ಟಿಗೆ ತಂದಿದ್ದಾರೆ. ರಾಜ್ ಕುಟುಂಬದವರೇ ಆದ ಶಿವರಾಜ್ ಕುಮಾರ್ ಇಲ್ಲಿ ನಾಯಕರಾದರೂ ಕೂಡ ಹಿಂದಿನ ಎರಡು ಪುನೀತ್ ಚಿತ್ರಗಳಲ್ಲಿ ಒತ್ತಡಕ್ಕೊಳಗಾದಂತೆ ಸೂರಿ ಇಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಹೊಸ ದಿಕ್ಕಿನಲ್ಲಿ ಕೆಲಸ ಮಾಡಿದ್ದಾರೆ. ಸೂರಿಯಂತೆಯೇ ಅನೇಕ ಸೋಲುಗಳಿಂದ ಕಂಗಾಲಾಗಿದ್ದ ಶಿವರಾಜ ಕುಮಾರ್ ಕೂಡ ತಮ್ಮನ್ನು ಸಂಪೂರ್ಣವಾಗಿ ಸೂರಿಯವರ ಕೈಗೆ ಒಪ್ಪಿಸಿಕೊಂಡಿದ್ದಾರೆ. ಬಿಡುಗಡೆಗೂ  ಮುಂಚೆ ಅನಗತ್ಯವಾದ ಹೈಪ್ ಉಂಟುಮಾಡದೇ ಸರಳವಾಗಿ ಬಿಡುಗಡೆ ಮಾಡಿರುವ ಚಿತ್ರವನ್ನು ಹೆಚ್ಚಿನ ನಿರೀಕ್ಷೆಗಳಿಲ್ಲದೇ ನೋಡಲು ಹೋಗುವ ಪ್ರೆಕ್ಷನಿಗೆ  ಹಬ್ಬದೂಟ ಉಣಬಡಿಸಿದ್ದಾರೆ ಸೂರಿ. ಇದು  ಅಂಡರ್ ವರ್ಲ್ಡ್ ನ ಕಥೆ ಆಧರಿಸಿರುವುದರಿಂದ ಹಾಗೂ ಹಳೆ ರೌಡಿಯೊಬ್ಬ ಸಾಮಾನ್ಯ ಬದುಕು ಕಟ್ಟಿಕೊಳ್ಳುವ ಕಥೆ ಹೊಂದಿದ್ದರಿಂದ ಅನೇಕರು ಇದು ''ಓಂ'' ನಂತಿದೆ ಅಂತಿದ್ದಾರೆ.ಶಿವರಾಜ್ ಕುಮಾರ್ ಮತ್ತು ಮಚ್ಚು ಚಿತ್ರದಲ್ಲಿರುವುದರಿಂದ ಹಾಗನ್ನಿಸುವುದು ಸಹಜ. ಕೆಲವರು ಹಿಂದಿಯ ''ಸತ್ಯಾ '' ಮತ್ತಿತರ ರಾಮ್ ಗೋಪಾಲ್ ವರ್ಮರ ಚಿತ್ರಗಳಿಗೆ ಹೋಲಿಸಿ ವಿಮರ್ಶಿಸುತ್ತಿದ್ದಾರೆ. ಇನ್ನೂ ಕೆಲವರು ಗಾಂಗ್ಸ್ ಆಫ್ ವಾಸೀ ಪುರ ನಂತಿದೆ ಅಥವಾ ಅಷ್ಟು ಚೆನ್ನಾಗಿದೆ ಎಂದು ಬರೆದಿದ್ದಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಸೂರಿ ಆ ಎಲ್ಲ ಹೋಲಿಕೆಗಳ ಸಂಭಾವ್ಯತೆಯಿದ್ದಾಗಿಯೂ ಕೂಡ, ಮಚ್ಚು ಲಾಂಗುಗಳಿಂದ ಕನ್ನಡ ಪ್ರೇಕ್ಷಕ ವಿಮುಖನಾಗಿರುವ ಈ ಕಾಲದಲ್ಲಿಯೂ ಕೂಡ ಇಂತಹ ಕಥೆಯನ್ನು ಆರಿಸಿಕೊಂಡು ಅಲ್ಲಿ ತಮ್ಮ ಛಾಪನ್ನು ಉಳಿಸಿಕೊಂಡು ವಿಭಿನ್ನ ನಿರೂಪಣೆ ಮತ್ತು ತಾರ್ಕಿಕ ಅಂತ್ಯದೊಂದಿಗೆ ಚಿತ್ರವನ್ನು ವಿಭಿನ್ನವಾಗಿಸಲು ಯಶಸ್ವಿಯಾಗಿದ್ದಾರೆ. ತೆಲುಗಿನ ಪೂರಿ ಜಗನ್ನಾಥ್ ರ ''ಬಿಸಿನೆಸ್ ಮ್ಯಾನ್'' ಚಿತ್ರದಂತೆ ಹಾಗೂ ಇನ್ನುಳಿದ ಅನೇಕ ಚಿತ್ರಗಳಂತೆ ರೌಡಿಯನ್ನು ''ಹೀರೋ'' ಮಾಡಿಹಾಕಿ ಅವನಿಂದ ಸಮಾಜದ  ಎಲ್ಲ ಸಮಸ್ಯೆಗಳಿಗೂ ಪರಿಹಾರ ತೋರಿಸಿಬಿಡುವ ಮೂರ್ಖ ಚಿತ್ರಗಳ ಪಟ್ಟಿಗೆ ಈ ಚಿತ್ರವೂ ಸೇರಿಬಿಡುವ ಅಪಾಯವಿತ್ತು. ಆದರೆ ಸೂರಿ ಅಂತಹ ತಪ್ಪನ್ನು ಅಪ್ಪಿತಪ್ಪಿಯೂ ಮಾಡಿಲ್ಲ. ಈ ಚಿತ್ರದಲ್ಲಿ ಹೀರೋ ಎಲ್ಲಿಯೂ ಕಾಣಿಸುವುದಿಲ್ಲ ಹಾಗೂ ವಿಲನ್ನುಗಳೂ ಇಲ್ಲ. ವ್ಯವಸ್ಥೆಯ ಒಳಗಿನ ಹುಳುಕುಗಳೇ ಇಲ್ಲಿ ಖಳನಾಯಕನ ಪಾತ್ರ ವಹಿಸಿವೆ. ಎನೂ ಅರಿಯದ ವಯಸ್ಸಿನಲ್ಲಿ ಬಡ ಹುಡುಗನೊಬ್ಬ ಸ್ನೇಹಕ್ಕಾಗಿ ಬಡಿದಾಡುವ ಹುಮ್ಮಸ್ಸಿನಲ್ಲಿ ನಡೆದು ಹೋಗುವ ಘಟನೆಗಳಿಂದಾಗಿ ಪೋಲಿಸ್ ಠಾಣೆ ಮೆಟ್ಟಿಲು ಹತ್ತುತ್ತಾನೆ. ಆ ಹುಡುಗನನ್ನು ಅವನಆಶ್ರಯದಾತರಿಂದ ಹಿಡಿದು ಅನೇಕರು ಬಳಸಿಕೊಳ್ಳುತ್ತಾರೆ.  ತನಗಾಗಿ ಅಂತ ಒಂದು ವೈಯಕ್ತಿಕ ಜೀವನವೇ ಇಲ್ಲದೇ  ಸ್ನೇಹಿತನಿಗಾಗಿ ಏನಾದರು ಸರಿ ಮಾಡಲು ಸಿದ್ಧವಾಗುವ ಒಬ್ಬ ಹುಂಬ ಹುಡುಗ ಈ ಕಡ್ಡಿಪುಡಿಅಲಿಯಾಸ್ ಆನಂದ. ಬಡ ಹುಡುಗಿಯೊಂದಿಗೆ ನಡೆಯುವ ಅವನ ಮದುವೆ, ಪೋಲಿಸ್ ವ್ಯವಸ್ಥೆಯಲ್ಲಿನ ರಾಕ್ಷಸ ಮುಖಗಳು, ಅನಗತ್ಯ ದ್ವೇಷ ಸಾಧಿಸುವ ಮೂರ್ಖರು ಮುಂತಾದ ಅನೇಕ ಸಂಗತಿಗಳ ಮಧ್ಯೆ ನಲುಗುವ ನಾಯಕನ ಸಂಘರ್ಷವನ್ನು ಸಮರ್ಥವಾಗಿ ಸೂರಿ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರವನ್ನು ಯಾವುದೇ  ಇತರ ಚಿತ್ರಗಳಿಗೆ ಹೋಲಿಸಿದರೆ ಅದು ತಪ್ಪಾಗುತ್ತದೆ. 

ಚಿತ್ರದ ಪ್ರಾರಂಭದಲ್ಲಿ ರಂಗಾಯಣ ರಘು ಅವರ ಆಂಗಿಕ ಭಾಷೆ ಮತ್ತು ಸ್ಲಂ ವಾತಾವರಣಗಳು ''ದುನಿಯಾ'' ಚಿತ್ರವನ್ನೇ ನೆನಪಿಸುತ್ತವಾದರೂ ಕೆಲವೇ ಕ್ಷಣಗಳಲ್ಲಿ ಚಿತ್ರ ಹೊಸ ರೂಪ ಪಡೆದುಕೊಂಡು ಎಲ್ಲವನ್ನು ಮರೆಸಿ ಮುಂದೆ ಸಾಗುತ್ತದೆ. ಆದರೆ ಬೆಂಗಳೂರಿನ ಸ್ಲಂ ಗಳಿಂದ ಸೂರಿ ಹೊರಬರದೇ  ಇರುವುದು ಅವರ ಬಲವೋ ಬಲಹೀನತೆಯೋ ತಿಳಿಯುವುದಿಲ್ಲ.  ಇಲ್ಲಿ ಮೈ ನವಿರೇಳಿಸುವ ದೃಶ್ಯಗಳಲ್ಲದೇ ಕಥೆಯಲ್ಲಿ ಹಾಸ್ಯವನ್ನು ಕೂಡ  ಹದವಾಗಿ ಸೂರಿ ಬೆರೆಸಿದ್ದಾರೆ. ಕೆಲ ದೃಶ್ಯಗಳಲ್ಲಂತೂ ಇದೇನು ನಾವು ಕಾಮಿಡಿ ಸಿನೆಮಾ ನೋಡುತ್ತಿದ್ದೆವಾ? ಎನಿಸುವಷ್ಟು ಸೂರಿ ನಗಿಸುತ್ತಾರೆ. ಆದರೆ ನಗಿಸಿದ ಮರುಕ್ಷಣ ಬೆಚ್ಚಿಬೀಳಿಸುವ ವಾಸ್ತವಗಳನ್ನು ಹೆಚ್ಚು ಆಡಂಬರವಿಲ್ಲದೇ ಪರಿಣಾಮಕಾರಿಯಾಗಿ ಹೇಳುತ್ತಾರೆ.  ಬಿಗುವಾದ ಚಿತ್ರಕಥೆಯ  ಹಾಗು ಅತ್ಯುತ್ತಮ ತಾಂತ್ರಿಕ ಶ್ರೀಮಂತಿಕೆಯ ಮೊದಲಾರ್ಧ ಮುಗಿದದ್ದೇ ಗೊತ್ತಾಗುವುದಿಲ್ಲ. ಚುರುಕು ಸಂಭಾಷಣೆಯ ಜೊತೆಗೆ ಡಾ. ರಾಜ್ಕುಮಾರ್ ರಸ್ತೆ,  ಮಿಣ ಮಿಣ ಎನ್ನುವ ಒಂದು ಟ್ಯೂಬ್ ಲೈಟ್, ಮತ್ತು ಒಂದು ಕೊಡೆ ಮುಂತಾದ ವಸ್ತುಗಳನ್ನು ಕಥೆಯ ಪಾತ್ರಗಳಾಗಿ ಬಳಸಿಕೊಂಡು ಕಥೆಗೆ ತಿರುವು ನೀಡುವ ಪರಿ ಅನನ್ಯ. ಬಡ ಹುಡುಗಿಯ ಕಿತ್ತು ಹೋದ ಚಪ್ಪಲಿಯ ಅಂಗುಷ್ಠ ವನ್ನು ತೋರಿಸುವ ಸೂರಿ ಎಷ್ಟು ಸೂಕ್ಷ್ಮಗ್ರಾಹಿ ಎನ್ನುವುದು ಮತ್ತೆ ಸಾಬೀತಾಗಿದೆ. ಈ ಬಾರಿ ಸತ್ಯ ಹೆಗಡೆ ಇಲ್ಲದೆ ಹೋದರೂ (ಕೆಲವೊಂದು ಜಾಗಗಳಲ್ಲಿ ಸತ್ಯ ಹೆಗಡೆಯವರ ಅನುಪಸ್ಥಿತಿ ಗೋಚರವಾದರೆ ಅದರ ಕೃಷ್ಣ ಅವರ ತಪ್ಪಲ್ಲ.) ಕೃಷ್ಣರ ಸಹಕಾರದಿಂದ ಸೂರಿ ಒಂದು ಸುಂದರ ಪೇಂಟಿಂಗ್ ನಂತೆ ಚಿತ್ರವನ್ನು ಬಿಡಿಸುತ್ತ ಹೋಗುತ್ತಾರೆ. ಅಲ್ಲಿ ಕಾವ್ಯಕ್ಕೂ ಜಾಗವಿರುತ್ತದೆ.


ಜೀವವೇ  ಪ್ರೀತಿಸು ಜೀವ ಹೋಗುವಂತೆ
ಸಂತೆಯ ಮಧ್ಯವೇ ಸ್ವಪ್ನ ತಾಗುವಂತೆ
ನಮ್ಮಿಬ್ಬರಲ್ಲೂ  ರೂಪಾಂತರ
ಆಗಾಗ ಸಣ್ಣ ಮಧ್ಯಂತರ
ಕನ್ನಡಿಯಲ್ಲಿಯೂ ಕಣ್ಣಿಗೆ ಬೀಳದ ಭೂಮಿಕೆಯೂ
ಇದೇತಕೂ ಸೆಳೆದಂತಿದೆ ನಿನ್ನನೂ

ಇಂತಹ ಸಾಲುಗಳು ಕೇವಲ ಸೂರಿ ಚಿತ್ರದಲ್ಲಿ ಮಾತ್ರ ಜಾಗ ಪಡೆಯಲು ಸಾಧ್ಯ. ಚಿತ್ರದ  ಕಥೆಯ ಆರಂಭದ ಹತ್ತು ನಿಮಿಷ ಮಾತ್ರ ಶಿವರಾಜ್ ಕುಮಾರ್ ಕಾಣಿಸುತ್ತಾರೆ. ಆಮೇಲೆ ಅವರು ಸಂಪೂರ್ಣವಾಗಿ ಆನಂದ್ ಅಲಿಯಾಸ್ ಕಡ್ಡಿಪುಡಿಯಾಗಿ ಪರಕಾಯ ಪ್ರವೇಶ ಮಾಡಿ ಬಿಟ್ಟಿದ್ದಾರೆ.  ಚಿತ್ರದ ಮೊದಲ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಅನಂತನಾಗ್  ಕಥೆಯನ್ನು ಮುನ್ನಡೆಸಿಕೊಂಡು ಹೊಗುತ್ತಾರೆ ಮತ್ತು ಕ್ಲೈಮಾಕ್ಸ್ ವರೆಗೂ ಅವರ ಪಾತ್ರ ನಿರ್ಣಾಯಕವಾಗಿದೆ. . ಅವರ ಯೋಗ್ಯತೆಗೆ ತಕ್ಕ ಪಾತ್ರದಲ್ಲಿ ಅನಂತನಾಗ್ ಅತ್ಯಂತ ಸಹಜವಾಗಿ ಒದಗಿ ಹೋಗಿದ್ದಾರೆ. ಅವರು ಯಾವ ಹಾಲಿವುಡ್ ನ ಆಸ್ಕರ್ ವಿಜೇತ ನಟನಿಗೂ ಕಮ್ಮಿ ಇಲ್ಲ ಎನುವುದು ಅವರ ಬಾಡಿ ಲ್ಯಾಂಗ್ವೇಜ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ರಂಗಾಯಣ ರಘು ಕೆಲವೇ ದೃಶ್ಯಗಳಲ್ಲಿ ದುನಿಯಾ ಹ್ಯಾಂಗೋವರಿನಲ್ಲಿದ್ದಂತೆ ಕಂಡು ಬಂದರೂ ಗಮನಾರ್ಹ ರೀತಿಯಲ್ಲಿ ಅವರ ಪಾತ್ರದ ಶೇಡ್  ಗಳು ಬದಲಾಗುತ್ತವೆ. ರಾಧಿಕಾ ಪಂಡಿತ್ ಈ ಚಿತ್ರದ ಸೆನ್ಸೇಷನ್ ಎಂದರೆ ತಪ್ಪಾಗಲಾರದು. ಅಷ್ಟು ಅದ್ಭುತವಾಗಿ ರಾಧಿಕಾ ತನ್ನ ಪಾತ್ರವನ್ನು ನಿಭಾಯಿಸಿದ್ದಾರೆ. ಕಣ್ಣುಗಳಲ್ಲೇ ಮಾತಾಡಿಬಿಡುತ್ತಾರೆ. ಹರಿಕೃಷ್ಣರ ಸಂಗೀತ ಹೊಸದಾಗಿದೆ. ಹಾಡುಗಳಿಗಿಂತ ಹಿನ್ನೆಲೆ ಸಂಗೀತದಲ್ಲಿ ಅವರು ಜಾಸ್ತಿ ಸ್ಕೋರ್ ಮಾಡಿದ್ದಾರೆ.

Sunday, May 5, 2013

ಮುಂಬೈ ಟಾಕೀಸ್ ಗೆ ಹೋಗಿದ್ರಾ ?


ಭಾರತೀಯ ಚಲನಚಿತ್ರ ಉದ್ಯಮ ನೂರು ವರ್ಷ ಪೋರೈಸಿದೆ. ಹೀಗಾಗಿ  ಕಳೆದ ಒಂದು ವರ್ಷದಿಂದ (ಬೆಂಗಳೂರಿನ ಗರುಡಾ ಮಾಲ್ ಸೇರಿದಂತೆ) ಉದ್ಯಮಕ್ಕೆ ಸಂಬಂಧಿಸಿದ ಅನೇಕರು ವಿವಿಧ ರೀತಿಯಲ್ಲಿ ಆ ಸಂಭ್ರಮ ಆಚರಿಸಿದ್ದಾರೆ. ಅದೇ ರೀತಿ ಬಾಲಿವುಡ್ಡಿನ  ವಯೋಕಾಂ 18 ಎಂಬ ನಿರ್ಮಾಣ ಸಂಸ್ಥೆ ಕೂಡ  ಸಂಭ್ರಮಾಚರಣೆಯ ಭಾಗವಾಗಿ ಒಂದು ಚಿತ್ರ ನಿರ್ಮಾಣ ಮಾಡಿದೆ. ಬಾಲಿವುಡ್ಡಿನ ನಾಲ್ಕು ಯುವ ನಿರ್ದೇಶಕರನ್ನ ಕರೆದು ಪ್ರತಿಯೊಬ್ಬರಿಗೂ ಒಂದೂವರೆ  ಕೋಟಿ ರೂಪಾಯಿಗಳ  ಬಡ್ಜೆಟ್ ನೀಡಿ  ತಲಾ ಇಪ್ಪತ್ತೈದು ನಿಮಿಷಗಳ ಕಿರು ಚಿತ್ರಗಳನ್ನು ಮಾಡಿಸಿ ಅವುಗಳನ್ನು ಒಟ್ಟುಗೂಡಿಸಿ ''ಮುಂಬೈ ಟಾಕೀಸ್'' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ .
ಈ ಚಿತ್ರ ಭಾರತೀಯ ಚಿತ್ರರಂಗದ ಎಲ್ಲರೂ ಸೇರಿ ನಿರ್ಮಿಸದೇ ಹೋದರೂ, ಹಾಗೂ ಭಾರತ ಸರ್ಕಾರ ಈ ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಕೈ ಜೊಡಿಸದಿದ್ದರೂ ಕೂಡ  ಇದು ಭಾರತೀಯ ಚಿತ್ರರಂಗದ ಅಧಿಕೃತ ಶತಮಾನೋತ್ಸವ ಆಚರಣೆಯಂತೆ ಬಿಂಬಿಸಲ್ಪಟ್ಟು  ಮೊನ್ನೆ ಶುಕ್ರವಾರ ಮೇ 3 ರಂದು ಚಿತ್ರ ಬಿಡುಗಡೆಯಾಗಿದೆ.   1913 ರ ಮೇ 3 ರಂದು  ದಾದಾ ಸಾಹೇಬ್ ಫಾಲ್ಕೆ ಅವರ ಮೊದಲ ಚಿತ್ರ ''ರಾಜಾ ಹರಿಶ್ಚಂದ್ರ'' ತೆರೆ ಕಂಡಿತ್ತು. ಹೀಗಾಗಿ ಬಿಡುಗಡೆಯ ದಿನಾಂಕ ಮತ್ತು ಈ ಚಿತ್ರದಲ್ಲಿನ ನಾಲ್ಕೂ ಕಿರು ಚಿತ್ರಗಳು ಭಾರತೀಯರ ಜೀವನದಲ್ಲಿನ ಸಿನೆಮಾದ ಮಹತ್ವವನ್ನು ಹೇಳುವ ಕಥೆಗಳೇ ಆಗಿರುವುದರಿಂದ ಇದನ್ನು ಶತಮಾನೋತ್ಸವ ಆಚರಣೆ ಎಂದೇ ಪರಿಗಣಿಸಬಹುದು. ಆದರೆ ದಾದಾ ಸಾಹೇಬ್ ಫಾಲ್ಕೆ ಅವರ ಸ್ಮರಣೆ ಕೂಡ  ಚಿತ್ರದ ಪ್ರಾರಂಭದಲ್ಲಿ ಇಲ್ಲದೇ ಇರುವುದು ವಿಷಾದನೀಯ. ವಾಸ್ತವವಾಗಿ ದಾದಾ ಸಾಹೇಬ್ ಫಾಲ್ಕೆ ಅವರ ಬಗ್ಗೆಯೇ ಒಂದು ಉತ್ತಮ ಚಿತ್ರ ಮಾಡಬಹುದಾಗಿತ್ತು. (ನಾಲ್ಕು ವರ್ಷಗಳ ಹಿಂದೆಯೇ ಮರಾಠೀ  ಭಾಷೆಯಲ್ಲಿ ದಾದಾ ಸಾಹೇಬ್ ರವರ ಬಗ್ಗೆ ಅತ್ತ್ಯುತ್ತಮ ಗುಣಮಟ್ಟದ ಚಿತ್ರ ನಿರ್ಮಾಣ ಆಗಿದೆ. ಆದರೆ ಅದು ಶತಮಾನೋತ್ಸವದ ಆಚರಣೆಯ ಅಂಗವಾಗಿ ಆಗಿರಲಿಲ್ಲ ಮತ್ತು ಅದು ಕೇವಲ ಒಂದು ಪ್ರಾದೇಶಿಕ ಭಾಷಾ ಚಿತ್ರವಾಗಿತ್ತು)

ಇದೆಲ್ಲ ಪಕ್ಕಕ್ಕಿಟ್ಟು   ಈ ನಾಲ್ಕು ಜನ ನಿರ್ದೇಶಕರ ನಾಲ್ಕು ಕಿರುಚಿತ್ರಗಳ ಈ ಗುಚ್ಛ ಹೇಗಿದೆ ಅಂತ ನೋಡುವುದಾದರೆ..   ಅದು ಒಂದು ಹೊಸ ಅಧ್ಯಾಯದ ಪ್ರಾರಂಭದಂತೆಯೇ ನವನವೀನತೆಯಿಂದ ಕೂಡಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಚಿತ್ರಗಳು ನಿರ್ಮಾಣವಾಗುವ ಕಾಲ ಸನ್ನಿಹಿತವಾಗಿದೆ ಎಂಬ ಹೊಸ ಭರವಸೆಯನ್ನು ಮೂಡಿಸುವಂತಿದೆ. ನಾಲ್ಕೂ ಕಿರುಚಿತ್ರಗಳು ಉತ್ತಮವಾಗಿವೆ.
ಮೊದಲನೇ ಕಿರು ಚಿತ್ರ ಕರಣ ಜೋಹರ್ ನದ್ದು. ಸಲಿಂಗಕಾಮಿಯಾದ ಮಧ್ಯಮ ವರ್ಗದ ಯುವಕನೊಬ್ಬನನ್ನು ಪ್ರೊಫೆಸರ್ ಆಗಿರುವ ತಂದೆಯೂ ಕೂಡ ಅರ್ಥ ಮಾಡಿಕೊಳ್ಳದೆ ನಿಂದಿಸಿ ಮನೆಯಿಂದ ಹೊರದಬ್ಬುವಲ್ಲಿಗೆ ಅದರ ಕಥೆ ಶುರುವಾಗುತ್ತದೆ. ಕಡಿಮೆ ಸಂಭಾಷಣೆ, ಕ್ಲೋಸ್-ಅಪ್ ಶಾಟ್ ಗಳು,  ವೇಗವಾದ ಚಿತ್ರಕಥೆ ಮೂಲಕ ಚಲಿಸುವ ಚಿತ್ರದಲ್ಲಿ  ವಿವರಗಳು ಕಡಿಮೆ ಇರುವುದರಿಂದ ಸಾಮನ್ಯ ಪ್ರೆಕ್ಷಕನಿಗೆ ಗಲಿಬಿಲಿಯಾಗುತ್ತದೆ. ಕೊನೆಯಲ್ಲಿ ಚಿತ್ರ ಅರ್ಥವಾದರೂ ಕೂಡ ಪಾತ್ರಗಳ ವಿಕ್ಷಿಪ್ತತೆಗೆ ಅರ್ಥ ತಿಳಿಯಲು ಕೊನೆಯ ವರೆಗೆ ಕಾಯುವುದು ಸ್ವಲ್ಪ ಕಿರಿಕಿರಿ. ತಾನು ಸಲಿಂಗಕಾಮಿಯಾಗಿದ್ದೂ ಕೂಡ ಸಾಮಾಜಿಕ ತಿರಸ್ಕಾರಕ್ಕೆ ಅಂಜಿ ಅದನ್ನು ಮುಚ್ಚಿಟ್ಟು ಸುಳ್ಳು ಹೇಳಿ ಹೆಣ್ಣಿನೊಂದಿಗೆ ಮದುವೆಯಾಗುವುದು ತಪ್ಪು ಎನ್ನುವ ಸಂದೇಶದೊಂದಿಗೆ ಚಿತ್ರ ಮುಗಿಯುತ್ತದೆ. ರಾಣಿ ಮುಖರ್ಜಿ ಬಾಲಿವುಡ್ಡಿನ ಗಾಸಿಪ್ ಬರೆಯುವ ಪತ್ರಿಕೆಯ ಸಂಪಾದಕಿಯಾಗಿ ಹಾಗೂ ಲೈಂಗಿಕ ಅತೃಪ್ತಳಾದ   ವಿವಾಹಿತ-ಮಹಿಳೆಯಾಗಿ ಮಾಡಿದ ನಟನೆ ಮತ್ತು ಅವಳು  ಕಾಣಿಸಿಕೊಂಡ ರೀತಿ ಅಚ್ಚರಿ ಮೂಡಿಸುತ್ತದೆ. ಅದು ಕಥೆಗೆ ಸರಿಯಾಗಿಯೇ ಇದ್ದರೂ ಕೂಡ ಅವಳನ್ನು ಸಾಪ್ರದಾಯಿಕ ಮತ್ತು ಬಬ್ಲಿ ಗರ್ಲ್ ಪಾತ್ರಗಳಲ್ಲಿ ಮೆಚ್ಚಿ ಅರಾಧಿಸುವವರಿಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಈ ಚಿತ್ರದ ವಿಚಿತ್ರವಾದ ಮೂಡ್ ನಿಂದ ಚೇತರಿಸಿಕೊಳ್ಳುವಷ್ಟರಲ್ಲೇ ದಿವಾಕರ್ ಬ್ಯಾನರ್ಜಿಯ ಕಿರು ಚಿತ್ರ ಪ್ರಾರಂಭವಾಗಿ ಬೇರೊಂದು ಲೋಕಕ್ಕೆ ಕರೆದುಕೊಂಡು ಹೊಗುತ್ತದೆ.
ಹಳೆ ಮುಂಬೈನ ಇರುಕು-ಮುರುಕು  ಚಾಳ್ ನಲ್ಲಿ ವಾಸಿಸುವ ನಿರುದ್ಯೋಗಿ ತಂದೆಯೊಬ್ಬ ತನ್ನ ಮಗಳಿಗೆ ಪ್ರತಿ ದಿನ ಒಂದು ಸಿನೆಮಾದ ಕಥೆ ಹೇಳಿ ಹೇಳಿ ಖಾಲಿಯಾಗಿರುತ್ತನೆ. ಅವನು ಹೇಳುವ ಎಲ್ಲ ಕಥೆಗಳೂ ಮಗಳಿಗೆ ಹಳೆಯದಾಗಿ ಹೊಗಿರುತ್ತವೆ.  ಹೊಸ ಚಿತ್ರ ನೋಡಲು ಅವನ ಬಳಿ  ಹಣ ಇರುವುದಿಲ್ಲ.  ಹೆಂಡತಿಯ ಸಂಬಳದಿಂದ ಸ್ವಲ್ಪ ಹಣ ಕೂಡಿಸಿ  ಇಮೋ ಹಕ್ಕಿಯನ್ನು ತಂದು ಸಾಕಿ ಅದರ ಮೊಟ್ಟೆ ಮಾರಿ ಬಿಸಿನೆಸ್ ಮ್ಯಾನ್ ಆಗುವ ಪ್ರಯತ್ನದಲ್ಲ್ಲಿಯೂ ಸೋತು ನೆರೆ ಹೊರೆ ಹೆಂಗಸರಿಂದ ಅಪಹಾಸ್ಯಕ್ಕೊಳಗಾಗುತ್ತಿರುತ್ತಾನೆ. ಇಂತಹ ನಿಸ್ಸಹಾಯಕ ವ್ಯಕ್ತಿ ಒಂದು ಸೆಕ್ಯುರಿಟಿ ಗಾರ್ಡ್ ಉದ್ಯೋಗದ ಸಂದರ್ಶನಕ್ಕೆ ಹೋಗಿ  ಮನೆಗೆ ಮರಳುವ ಹಾದಿಯಲ್ಲಿ ಒಬ್ಬ ದೊಡ್ಡ ಸ್ಟಾರ್ ನಟನ ಸಿನೆಮಾ ಶೂಟಿಂಗ್ ನೋಡುತ್ತಾ ನಿಲ್ಲುತ್ತಾನೆ. ಮುಂದೆ ನಡೆಯುವ ಘಟನೆಗಳನ್ನು ಹೇಳಿ ನಾನು ನಿಮ್ಮ ಸಂತೋಷ ಹಾಳು  ಮಾಡುವುದಿಲ್ಲ. ಅದನ್ನು ನೀವು ನೋಡಿ ಸುಖಿಸಿದರೆನೇ ಚೆಂದ. ಈ ಕಿರು ಚಿತ್ರದ ಕೊನೆಯ ಎರಡು ಮೂರು ನಿಮಿಷಗಳಲ್ಲಿ ಮೂಡಿ ಬರುವ ದ್ವನಿ ರಹಿತವಾದ ನಟನಾ ಚಿತ್ರಿಕೆಯನ್ನು  ದೂರದಿಂದ ಮೃದುವಾದ ಮುರಳೀ ನಾದದೊಂದಿಗೆ ತೊರಿಸಲಾಗಿದೆ. ಅದನ್ನು ನೋಡುವಾಗ ನಿಮ್ಮ ಕಣ್ಣು ಒದ್ದೆಯಾಗದೇ ಹೋದರೆ, ನಿಮಗೆ ಸಿನೆಮಾ ನೋಡಲಿಕ್ಕೆ ಬರುವುದಿಲ್ಲ ಅಥವಾ ನಿಮ್ಮದು ಮಾನವಸಹಜ ಸಂವೇದನೆ ಇಲ್ಲದ ಹೃದಯ ಎಂದೇ ಹೇಳಬೇಕಾಗುತ್ತದೆ. ಇಲ್ಲಿ ನವಾಜುದ್ದೀನ್ ಸಿದ್ದಿಕಿ ಎಷ್ಟು ಅದ್ಭುತ ನಟ ಅನ್ನುವುದು ಮತೊಮ್ಮೆ ಸಾಬೀತಾಗಿದೆ. ಇದು ಮೂಲದಲ್ಲಿ ಸತ್ಯಜಿತ್ ರೆ ಅವರು ಬರೆದ ಬೆಂಗಾಲೀ ಕಿರುಗಥೆ ಯಾಗಿದ್ದು ಅದನ್ನು ಇಲ್ಲಿ   ಈಗಿನ ಕಾಲಕ್ಕೆ ತಕ್ಕಂತೆ ಬದಲಾಯಿಸಲಾಗಿದೆ ಮತ್ತು ಕಥೆಯ ಹಿನ್ನೆಲೆ ಕಲ್ಕತ್ತಾದಿಂದ ಮುಂಬೈ ಗೆ ಶಿಫ್ಟ್ ಮಾಡಿಕೊಳ್ಳಲಾಗಿದೆ 

ವಿರಾಮದ ನಂತರದ ಮೂರನೇ ಕಿರುಚಿತ್ರವನ್ನು ಝೊಯಾ ಅಖ್ತರ್ ನಿರ್ದೆಶಿಸಿದ್ದಾಳೆ.  ಶಾಲೆಗೇ ಹೋಗುವ ಬಾಲಕನೊಬ್ಬ ಕತ್ರಿನಾ ಕೈಫ್ ಡಾನ್ಸ್ ನೋಡಿ ಅದರಿಂದ  ಪ್ರೇರಿತನಾಗಿ ಡಾನ್ಸರ್ ಆಗುವ ಕನಸು ಕಟ್ಟಿಕೊಳ್ಳುವ ಕಥೆ ಹೊಂದಿರುವ ಈ ಚಿತ್ರ ಇದು. ಅನೇಕ ಉತ್ತಮ ದೃಶ್ಯಸಂಯೋಜನೆಗಳಿಂದಾಗಿ ಮನಸಿಗೆ ಖುಷಿ ಕೊಡುತ್ತದೆ. ಆದರೆ ಅತಾರ್ಕಿಕವಾಗಿ ಅಂತ್ಯ ಕಾಣುತ್ತದೆ.

ಕೊನೆಯ ಕಿರುಚಿತ್ರ ಅನುರಾಗ್ ಕಶ್ಯಪ್ ಎಂಬ ಅಪ್ಪಟ ದೇಸೀ ಪ್ರತಿಭೆಯ ಕೈ ಚಳಕದಿಂದ ಮೂಡಿದ್ದು. ಉತ್ತರ ಪ್ರದೇಶದ ಹಳ್ಳಿಯಲ್ಲಿ ಜೀವಿಸುವ ಅಮಾಯಕ ಯುವಕನೊಬ್ಬ ತನ್ನ ತಂದೆಯ ಆಸೆಯಂತೆ ಅಮಿತಾಭ್ ಬಚ್ಚನ್ ನನನ್ನು ಭೇಟಿಯಾಗಿ ಅವರಿಗೆ ತನ್ನ ತಾಯಿ ಮಾಡಿದ ಮುರಬ್ಬಾ ಎನ್ನುವ ಖಾದ್ಯ ತಿನ್ನಿಸಿ ಹೋಗಲು ಮುಂಬೈಗೆ ಬರುತ್ತಾನೆ. ಅಮಿತಾಭ್ ಬಚ್ಚನ್ ತಿಂದಮೇಲೆ ಉಳಿದಿರುವ ಎಂಜಲು ''ಮುರಬ್ಬಾ''ವನ್ನು ತಿನ್ನುವುದು ಆ ಯುವಕನ ತಂದೆಯ ಕೊನೆಯ ಆಸೆಯಾಗಿರುತ್ತದೆ. ಅನುರಾಗ್ ಕಶ್ಯಪ್ ಶೈಲಿಯ ಪಕ್ಕಾ ದೇಸೀ ಸಂಭಾಷಣೆ ಮತ್ತು ನಿರ್ದೇಶನ ನಗಿಸಿ ನಗಿಸಿ ಸುಸ್ತು ಮಾಡಿ ಹಾಕುತ್ತವೆ. ಆದರೆ ಕಥೆ ಮುಂದುವರೆದಂತೆ ಹಾಸ್ಯ ವಿಷಾದವಾಗಿ, ಅನುಕಂಪವಾಗಿ ಬದಲಾಗಿ ಪ್ರೇಕ್ಷಕನಿಗೆ ಅದ್ಭುತವಾದ ಸಿನೆಮಾಟಿಕ್ ಅನುಭವವನ್ನು ನೀಡುತ್ತದೆ.  ಒಂದು ದೃಶ್ಯದಲ್ಲಿ ಅಮಿತಾಭ್ ಬಚ್ಚನ್ ಸ್ವತಃ ಕಾಣಿಸುತ್ತಾರೆ.

ಒಮ್ಮೆ ನೋಡಿಬನ್ನಿ ..

Sunday, July 1, 2012

ಬಂದಾ ನೋಡು ಕಿಂದರಿಜೋಗಿ


ಹದಿನೈದು  ವರ್ಷಗಳ ಹಿಂದೆ ಯಶಸ್ಸಿನ ಅಲೆಯಲ್ಲಿ ತೇಲುತ್ತಾ  ಒಟ್ಟೊಟ್ಟಿಗೆ ನಾಲ್ಕು ಐದು ಸಿನೆಮಾ ಗಳನ್ನು ಶೂಟ್  ಮಾಡುತ್ತಿದ್ದ ರಾಮ್ ಗೋಪಾಲ್ ವರ್ಮಾ ಬಳಿ ಇಪ್ಪತ್ನಾಲ್ಕು ವರ್ಷ ವಯಸ್ಸಿನ ಒಬ್ಬ ಯುವಕ ಬಂದು ''ಸಾರ್, ಒಂದು ಕಥೆ ಮತ್ತು ಚಿತ್ರ ಕಥೆ ಬರೆದಿದೀನಿ, ನೀವು ಅದನ್ನು ಸಿನೆಮಾ ಮಾಡಿ'' ಅಂದ . ಕಥೆ ಚೆನ್ನಾಗಿತ್ತು.  ಆದರೆ ಈ ಹುಡುಗನ್ನು ಮತ್ತು ಅವನ ಬರವಣಿಗೆಯನ್ನು  ನಂಬಿ ಇಷ್ಟು ದೊಡ್ಡ ಸಿನೆಮಾ ಮಾಡೋದು ಕಷ್ಟ ಅಂತ ಅನಿಸಿ ವರ್ಮಾ ಸಾಹೇಬರು ಸೌರಬ್ ಶುಕ್ಲಾರನ್ನು ಜೊತೆ ಮಾಡಿ ಆ ಹುಡುಗ ಬರೆದದ್ದನ್ನು ಸ್ವಲ್ಪ ತಿದ್ದಿ ಅಂತ ಹೇಳಿದ್ರು. ಸೌರಬ್ ಶುಕ್ಲಾರ  ಮೇಲ್ವಿಚಾರಣೆಯಲ್ಲಿ ಆ ಹುಡುಗ ಹೈದರಾಬಾದಿನ  ಫಾರ್ಮ್ ಹೌಸಲ್ಲಿ ಕುಳಿತು ಮತ್ತೆ ಚಿತ್ರ-ಕಥೆ, ಸಂಭಾಷಣೆ ಬರೆದ.  ಅವನು ಬರೆದ  ಸ್ಕ್ರಿಪ್ಟ್ ಹಾಳೆಗಳನ್ನು ಕೈಯಲ್ಲಿ ಹಿಡಿದು ರಾಮು  ಸುಮ್ಮನೆ ಜೋವಿಯಲ್ ಆಗಿ ಸಿನೆಮಾ ಮಾಡಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಮು ತಾವೇ ಸ್ವತಃ ''ಆ ಸಿನೆಮಾ ಮಾಡುವಾಗ ಇದು ನನಗೆ ಅಷ್ಟು  ಒಳ್ಳೆಯ  ಹೆಸರು ತರುತ್ತೆ ಅಂತ ಗೊತ್ತೇ ಇರಲಿಲ್ಲ.  ಸುಮ್ನೆ ಆಡ್ತಾ ಆಡ್ತಾ ಮಾಡಿದ ಸಿನೆಮಾ ಅದು''  ಅಂತ ಹೇಳಿದ್ರು.  ಆದರೆ ಅವರು ಕನಸು ಮನಸಿನಲ್ಲೂ ಎಣಿಸಿರದಷ್ಟು ಖ್ಯಾತಿಯನ್ನು ಎಲ್ಲ ವಲಯಗಳಲ್ಲಿಯೂ ಆ ಒಂದೇ ಸಿನೆಮಾ ಅವರಿಗೆ ತಂದು ಕೊಟ್ಟಿದ್ದು ಸಿನೆಮಾ ನೋಡುವವರಿಗೆಲ್ಲ ಗೊತ್ತಿರುವ ವಿಚಾರ. 

 ರಾಮು ಮಾಡಿದ ಆ ಚಿತ್ರ ಬಿಡುಗಡೆ ಆದ ಮೇಲೆ ಅದನ್ನು ನೋಡಿದ ಅಮಿತಾಬ್ ಬಚ್ಚನ್ ಆ ಕಥೆ-ಚಿತ್ರ ಕಥೆ ಬರೆದ ಹುಡುಗನನ್ನು ಮನೆಗೆ ಕರೆಸಿಕೊಂಡು ತಮಗಾಗಿ  ಒಂದು ಕಥೆ ಬರೆಯಲು ಹೇಳಿದರು.   ಆಗ ಅವರು ಮಾಡಿದ್ದೆಲ್ಲವನ್ನೂ  ಕಳೆದುಕೊಂಡು  ಸಾಲ  ತೀರಿಸಲಿಕ್ಕಾಗಿ, ಒಂದೇ ಒಂದು ಯಸಸ್ಸಿಗಾಗಿ  ''ಸೂರ್ಯವಂಶಂ'' ನಂತಹ ತಮಿಳು ಸಿನೆಮಾ ಗಳನ್ನು ರಿಮೇಕ್  ಮಾಡುತ್ತಿದ್ದ ''ಕೌನ್ ಬನೇಗಾ ಕರೋಡ್ ಪತಿ''ಗಿಂತ ಮುಂಚಿನ  ಕಾಲ ಅದು.   ಈ ಹೊಸ ಹುಡುಗ ಹೇಳಿದ ಕಥೆ ಅವರಿಗೆ ಇಷ್ಟವಾದರೂ ಕೂಡ ಆ ಹುಡುಗನಿಗೆ we should respect the audience  ಎಂದು ಬೋಧನೆ ಮಾಡಿದರು. ತನ್ನ ಹಿರೋಗಿರಿಗೆ ತಕ್ಕಂತೆ ಕಥೆ ಬದಲಿಸಲು ಹೇಳಿದರು. ಆ ಹುಡುಗ ಸಾಧ್ಯವಿಲ್ಲ ಎಂದು ಎದ್ದು ಬಂದಿದ್ದ. ಮತ್ತೆಂದೂ ಅಮಿತಾಬ್ ಮನೆಯಿಂದ ಆ ಹುಡುಗನಿಗೆ ಯಾವ ಕರೆಯೂ ಬರಲಿಲ್ಲ. ಮುಂದೆ ಆ ಹುಡುಗ ತಾನು ಬರೆಯುವ ಕಥೆಗಳಿಗೆ ತಾನೇ ನಿರ್ದೇಶಕನಾದ.  ಅವನು ಮಾಡಿದ ಮೊದಲ ಚಿತ್ರವನ್ನು ಬಾರತೀಯ ಸೇನ್ಸಾರ್  ಬೋರ್ಡ್ ಇಂದಿಗೂ ಕೂಡ ಬಿಡುಗಡೆ ಮಾಡಲು ಬಿಟ್ಟಿಲ್ಲ. ಅವನು ಬರೆಯುವ ಕಥೆಗಳಿಗೆ ನಿರ್ಮಾಪಕರೇ ಸಿಗುತ್ತಿರಲಿಲ್ಲ. ಆದರೂ ಅದು  ಹೇಗೋ ಮಾಡಿ ಸಿನೆಮಾ ಮಾಡುತ್ತಿದ್ದ. ಬಾಲಿವುಡ್ಡಿನ ಅನೇಕ ಗುಂಪುಗಳು ಅವನ ಸಿನೆಮಾಗಳು ಬಿಡುಗಡೆಯಾಗದಂತೆ ಮತ್ತು ಅವನಿಗೆ ನಿರ್ಮಾಪಕರು ಸಿಗದಂತೆ ನೋಡಿಕೊಂಡರು. ಅವನ ಬಗ್ಗೆ ಅನಗತ್ಯ ಊಹಾಪೋಹಗಳನ್ನು ಹರಿಬಿಟ್ಟರು.  ವಿಮರ್ಶಕರು ಅವನನ್ನು ಹುಚ್ಚ ಎಂದು ಕರೆದರು. ಅವನ ಹೆಂಡತಿ ಇದೆಲ್ಲ ಕಷ್ಟ ಸಹಿಸಲಾರದೆ ಅವನಿಂದ ವಿಚ್ಛೇದನ ಪಡೆದಳು. 

ಆದರೂ ಆ ಹುಡುಗ ಸಿನೆಮಾ ಮಾಡುವುದನ್ನು ನಿಲ್ಲಿಸಲಿಲ್ಲ. ಅವನ ಒಂದು ಸಿನೆಮಾ ಯಶಸ್ವಿಯಾದ ಕೂಡಲೇ  ಒಂದೊಂದಾಗಿ ಅವನ ಹಳೆಯ ಚಿತ್ರಗಳೆಲ್ಲ ಡಬ್ಬದಿಂದ ಹೊರಬರತೊಡಗಿದವು ಮತ್ತು ಯಶಸ್ವಿಯೂ ಆದವು.  ಅವನು ಅನೇಕ ಸಿನೆಮಾಗಳನ್ನು ಮಾಡುವುದಲ್ಲದೆ ತನ್ನಂತಹ ಅನೇಕ ಹೊಸ ಬರಹಗಾರರನ್ನು ನಿರ್ದೇಶಕರನ್ನು ಪ್ರೋತ್ಸಾಹಿಸಿದ.  ಅವರ  ಸಿನೆಮಾಗಳನ್ನೂ ತಾನೇ ಸ್ವತಃ ನಿರ್ಮಾಣ ಮಾಡಿದ. ''ಆರ್ಕುಟ್'' ಹಾಗೂ  ''ಫೆಸ್ ಬುಕ್'' ಗಳ  ಮೂಲಕ ತನ್ನ  ಚಿತ್ರಕ್ಕೆ ಹಣ ಹಾಕುವ ಉತ್ಸಾಹಿಗಳನ್ನು  ಹುಡುಕಿಕೊಂಡ. ಅವನು ಮತ್ತು  ಅವನ ಮಿತ್ರರ  ಗುಂಪು ಇವತ್ತು ಯಾವುದೇ ಹೊಸ ಚಿತ್ರಕ್ಕೆ ಕೈ ಹಾಕಿದರೆ ನಿರ್ಮಾಪಕರನ್ನು ಹುಡುಕುವ ಚಿಂತೆಯೇ ಇಲ್ಲ. ಏಕೆಂದರೆ  ವಿದೇಶಗಳಲ್ಲಿ ಉದ್ಯೋಗ ಮಾಡುವ ಯುವಕರು ಮತ್ತು ಅನೇಕ ಶ್ರೀಮಂತರು ಈ ಯುವಕನ ಚಿತ್ರಗಳಿಗೆ ಹಣ ಹಾಕಲು  ಫೆಸ್ ಬುಕ್ಕಿನಲ್ಲಿ ಸಾಲು ಸಾಲಾಗಿ ಸಿದ್ಧರಾಗುತ್ತಾರೆ. ಆತನ ಮತ್ತು ಆತನ ಪ್ರೊಡಕ್ಷನ್ ಹೌಸಿನಿಂದ  ಬರುವ ಚಿತ್ರಗಳಿಗಾಗಿಯೇ ಕಾದು ಕೂರುವ ಪ್ರೇಕ್ಷಕರ ಸಂಖ್ಯೆ ಕೋಟಿಗಳನ್ನು ದಾಟಿದೆ ಮತ್ತು ದೇಶ ವಿದೇಶಗಳ ಗಡಿಯನ್ನೂ ದಾಟಿದೆ.  ಹೀಗೆ ಯಾರ ಸಹಾಯವೂ ಇಲ್ಲದೇ,  ಎಲ್ಲ ರೀತಿಯ ಅವಮಾನಗಳನ್ನು, ತುಳಿತಗಳನ್ನು ಅನಗತ್ಯ ದ್ವೇಷಗಳನ್ನು ಎದುರಿಸಿ  ಯಾವುದೇ ನಿರ್ಮಾಪಕರುಗಳ ಹಂಗಿಲ್ಲದೆ  ಸ್ವತಂತ್ರವಾಗಿ ಸಿನೆಮಾ ಮಾಡುವ, ಇಂದಿಗೂ ಹೆಗಲಿಗೆ ಒಂದು ಲ್ಯಾಪ್ ಟಾಪ್ ನೇತಾಡಿಸಿಕೊಂಡು ಮುಂಬೈನ ಆಟೋರಿಕ್ಷಾಗಳಲ್ಲಿ  ಓಡಾಡುವ  ಮೂವತ್ತೆಂಟು ವರ್ಷ ವಯಸ್ಸಿನ ಯುವಕ  ಸಾವಿರಾರು ಕೋಟಿ ವಹಿವಾಟಿನ, ಕಾರ್ಪೋರೆಟ್ ಕಂಪೆನಿಗಳ ಮತ್ತು ದೊಡ್ಡ ದೊಡ್ಡ ತಿಮಿಂಗಲಗಳ  ಹಿಡಿತದಲ್ಲಿರುವ ಬಾಲಿವುಡ್ ಎಂಬ ಮಹಾಸಾಗರದಲ್ಲಿ ತನ್ನದೇ ಆದ   ''ಇಂಡಿಪೆಂಡೆಂಟ್ ಸಿನೆಮಾ''  ಎಂಬ ಹೊಸ ಅಲೆಯನ್ನು ಎಬ್ಬಿಸಿದ್ದಾನೆ. ಆ ಅಲೆಯ ರಭಸಕ್ಕೆ ಎಲ್ಲರೂ ಕಂಗಾಲಾಗಿ ಕಣ್ ಬಿಟ್ಟು  ನೋಡುತ್ತಿದ್ದಾರೆ. ಇತ್ತೀಚೆಗೆ ನಡೆದ ಕ್ಯಾನ್ಸ್  ಅಂತರ್ ರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಆ ಯುವಕನನ್ನು ತೀರ್ಪುಗಾರನನ್ನಾಗಿ ನೇಮಿಸಲಾಗಿತ್ತು. 

ಕಾಲದ ಹೊಳೆಯಲ್ಲಿ ಹದಿನಾಲ್ಕು ವರ್ಷಗಳು ಹರಿದು  ಹೋಗಿವೆ.  ಅಂದು ಮನೆಗೆ ಕರೆದು ಆ ಯುವಕನಿಗೆ ಹಿರೋಗಿರಿಯ ಮತ್ತು ಬಾಲಿವುಡ್ ಗ್ರಾಮರ್ ಬಗ್ಗೆ  ಪಾಠ ಹೇಳಿಕೊಟ್ಟ ಅಮಿತಾಬ್ಹ್ ಬಚ್ಚನ್ ಮೊನ್ನೆ  ''ಗ್ಯಾಂಗ್ಸ್  ಆಫ್ ವಸೀಪುರ್'' ಚಿತ್ರ ನೋಡಿದ ಕೂಡಲೇ  “What a film,”  direction is  amazing… Indian cinema taking path breaking strides… pride and extreme gratification.” ಎಂದು ಟ್ವಿಟ್ಟರ್ ನಲ್ಲಿ ಪ್ರತಿಕ್ರಯಿಸಿದ್ದಾರೆ.

 ನಿಮಗೀಗ ಅರ್ಥ ವಾಗಿರಬಹುದು. ಇಷ್ಟ್ಹೊತ್ತು ನಾನು ಹೇಳಿದ್ದು  ಯಾರ ಬಗ್ಗೆ ಎಂದು.

 yes ..!  you are right.  ಅದು ಮತ್ಯಾರೂ ಅಲ್ಲ..! ತನ್ನ  ಇಪ್ಪತ್ಮೂರನೇ ವಯಸಿನಲ್ಲಿ ''ಸತ್ಯಾ'' ದಂತಹ ಚಿತ್ರದ ಅದ್ಭುತ  ಸ್ರಿಪ್ಟ್  ಬರೆದು ರಾಮ್ ಗೋಪಾಲ್ ವರ್ಮಾಗೆ ನೀಡಿದ ''ಅನುರಾಗ್ ಕಶ್ಯಪ್'' ಎಂಬ ತರುಣನ ಬಗ್ಗೆಯೇ ಇಷ್ಟೆಲ್ಲಾ ಹೇಳಿದ್ದು. . 

ತಮಿಳು -ತೆಲುಗು ಅಥವಾ ಇಂಗ್ಲೀಷ್ ಚಿತ್ರಗಳನ್ನು ಕಾಪಿ ಹೊಡೆಯುವ ಬಹುತೇಕ  ಬಾಲಿವುಡ್ಡಿನ ಮಸಾಲಾ ಚಿತ್ರಗಳನ್ನು ನೋಡಿ ನೋಡಿ ಬೇಸತ್ತು ಚಿತ್ರಗಳನ್ನು ನೋಡುವುದನ್ನೇ ಬಿಟ್ಟಿದ್ದ ಲಕ್ಷಾಂತರ ಪ್ರೇಕ್ಷಕರು ಮತ್ತೆ ಚಿತ್ರಗಳನ್ನು ನೋಡಲು ಪ್ರಾರಂಭಿಸಿದ್ದಾರೆ, ಮತ್ತು ಚಿಕ್ಕ ಚಿತ್ರಗಳಿಗೂ  ಕೂಡ  ಆನ್ ಲೈನ್  ಮತ್ತು ವಿದೇಶಿ ಮಾರುಕಟ್ಟೆ ತೆರೆದುಕೊಳ್ಳುತ್ತಿದೆ ಎಂದರೆ, ಅದರ ಶ್ರೇಯಸ್ಸು ಪೂರ್ಣವಾಗಿ ಅನುರಾಗ್ ಕಶ್ಯಪ್ ಮತ್ತು ಅವನ ಮಿತ್ರರಿಗೆ ಸೇರುತ್ತದೆ. ಆರ್ಟ್ ಸಿನೆಮಾ, ಕಮರ್ಷಿಯಲ್ ಸಿನೆಮಾ, ಪ್ಯಾರಲಲ್ ಸಿನೆಮಾ, ಬ್ರಿಡ್ಜ್ ಸಿನೆಮಾ ಮುಂತಾದ ಸಿನೆಮಾದ ಎಲ್ಲ ಪ್ರಕಾರಗಳನ್ನು ಕೇಳಿದ್ದ ಭಾರತೀಯರಿಗೆ ''ಇಂಡಿಪೆಂಡೆಂಟ್ ಸಿನೆಮಾ'' ಎಂಬ ಶಬ್ದವನ್ನು ಪರಿಚಯಿಸಿದ ಕೀರ್ತಿಯೂ ಆತನಿಗೆ ಸಲ್ಲುತ್ತದೆ. ಇತ್ತೇಚೆಗೆ ಬಾಲಿವುಡ್ ನ ಟ್ರೇಡ್ ಪಂಡಿತರು ಹಾಗೂ ವಿಮರ್ಶಕರು ಅನುರಾಗ್ ನನ್ನು The poster boy of Hindi Cinema ಎಂದು ಕೊಂಡಾಡುತ್ತಿದ್ದಾರೆ. ಏಕೆಂದರೆ ಆರ್ಥಿಕವಾಗಿ ಯಶಸ್ವಿಯಾಗಿದ್ದರೂ ಕೂಡ ಮಸಾಲೆಯ ಭರಾಟೆಯಲ್ಲಿ ಬಿದ್ದು ಅಂತರಾಷ್ಟೀಯ ಮಟ್ಟದಲ್ಲಿ ಬಿದ್ದು ಹೋಗಿದ್ದ ಹಿಂದಿ ಸಿನೆಮಾದ ಮರ್ಯಾದೆಯನ್ನು ಮತ್ತೆ ಎತ್ತಿ ಹಿಡಿಯುವುದಲ್ಲದೇ,  ಹತಾಶೆಯಿಂದ - ನಿರಾಸೆಯಿಂದ ಕಳೆದು ಹೋಗಿದ್ದ ಪ್ರಬುದ್ಧ ಪ್ರೇಕ್ಷಕ ವರ್ಗವನ್ನು ಮತ್ತೆ ಆಕರ್ಷಿಸಿ ಒಂದು ಹೊಸ ರೀತಿಯ ಸಿನೆಮಾ ಸಂಸ್ಕೃತಿ ನಿರ್ಮಾಣಮಾಡಿ ಬಾರತೀಯ ಸಿನೆಮಾದ ಪೋಸ್ಟರ್ ನ  ಗೌರವವನ್ನು ಅನುರಾಗ್ ಉಳಿಸಿದ್ದಾನೆ. 


ರಾಮ್ ಗೋಪಾಲ್ ವರ್ಮಾ ಸ್ವಲ್ಪ ಮಂಕಾದ ನಂತರ ವಿಶಾಲ್ ಭಾರದ್ವಾಜ್ ಅದ್ಭುತವಾಗಿ ಚಿತ್ರಗಳನ್ನು ಮಾಡಿ ಭರವಸೆ ಮೂಡಿಸಿದ್ದು ನಿಜ. ಆದರೆ ಅನುರಾಗ್ ಕಶ್ಯಪ್ ತಾನು ಚಿತ್ರ ಮಾಡುವುದು ಮಾತ್ರವಲ್ಲದೆ ಅನೇಕ ಯುವಕರನ್ನು ಪ್ರೋತ್ಸಾಹಿಸಿ ಅವರಿಂದ ವರ್ಷಕ್ಕೆ ನಾಲ್ಕಾರು ಚಿತ್ರಗಳನ್ನು ಮಾಡಿಸಿ ತನ್ನದೇ ಒಂದು ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಂಡು  ಫಿಲ್ಮ್ ಮೇಕಿಂಗ್ ನ ಕನಸು ಕಾಣುತ್ತಿರುವ ಸಾವಿರಾರು ಯುವ ಪ್ರತಿಭೆಗಳಿಗೆ  ಆಶಾಕಿರಣವಾಗಿ ಕಾಣಿಸುತ್ತಿದ್ದಾನೆ.   ಇಂತಹ ಅನೇಕ ಕಾರಣಗಳಿಗಾಗಿ ಅನುರಾಗ್ ರಾಮು ಮತ್ತು ವಿಶಾಲ್ ಭಾರದ್ವಾಜರಿಗಿಂತ ವಿಭಿನ್ನವಾಗಿ ನಿಲ್ಲುತ್ತಾನೆ. 

ಅನುರಾಗ್ ನಂತಹ ನಿರ್ಮಾಪಕ ಸಿಗದೇ  ಹೋಗಿದ್ದರೆ ವಿಕ್ರಂ ಮೊಟವಾನೆ ಯಂತಹ  ಯುವಕ ''ಉಡಾನ್'' ನಂತಹ ಸಂವೇದನಶೀಲ ಚಿತ್ರವನ್ನು ತೆರೆಯ ಮೇಲೆ ತರಲು ಸಾಧ್ಯವೇ ಇರಲಿಲ್ಲ. ನೀವು ''ಉಡಾನ್'' ಚಿತ್ರವನ್ನು ನೋಡಿದವರೇ ಆಗಿದ್ದರೆ ಅಂತಹ ಚಿತ್ರವನ್ನು ಕೊಟ್ಟಿದ್ದಕ್ಕೆ ಮತ್ತು ಅದರ ನಿರ್ದೇಶಕನನ್ನು ಪರಿಚಯಿಸಿದ್ದಕ್ಕೆ ನೀವು  ಜೀವನ ಪರ್ಯಂತ ಅನುರಾಗ್ ಕಶ್ಯಪ್ ಬಗ್ಗೆ  ಋಣಿಯಾಗಿರುತ್ತೀರಿ. 

ಮೊನ್ನೆ ಟಿವಿಯಲ್ಲಿ ಅನುರ್ರಾಗ್ ಕಶ್ಯಪ್ ಹೇಳುತ್ತಿದ್ದ ..''ನನಗೆ ಹೊಸ ನಟರ ಬಗ್ಗೆ ಭಯ ಇಲ್ಲ, ನನಗೆ ಹೊಸ ರೀತಿಯ ಕಥೆಯ ಬಗ್ಗೆ ಭಯ ಇಲ್ಲ. ನನಗೆ ನನ್ನ ಚಿತ್ರ ಪ್ಲಾಪ್ ಆಗುವ ಭಯ ಇಲ್ಲ. ಏಕೆಂದರೆ ನನಗೆ ಅತೀ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಸಿನೆಮಾ ಮಾಡುವುದಕ್ಕೆ ಬರುತ್ತದೆ'' ಅಂತ.  ಈ ಮಾತು ಅಹಂಕಾರದಿಂದ ಕೂಡಿದೆ ಅನಿಸಬಹುದು. ಆದರೆ ಅವನ ಮಾತು ವಾಸ್ತವ. ಆ ಮಾತು ನಮ್ಮ ಕನ್ನಡದ ನಿರ್ದೇಶಕರಿಗೆ ಅರ್ಥವಾದರೆ ಕನ್ನಡ ಪ್ರೇಕ್ಷಕರಿಗೂ ಒಂದಷ್ಟು ಒಳ್ಳೆಯ ಚಿತ್ರಗಳನ್ನು ನೋಡುವ ಯೋಗ ಬರಬಹುದು.

ಇದೆಲ್ಲ ಇರಲಿ, ಅಂದ ಹಾಗೆ ನಿಮಗೆ ಅನುರಾಗ್ ಕಶ್ಯಪ್ ಯಾರು ಎಂದು ಗೊತ್ತಾ..?  ಗೊತ್ತಿಲ್ಲದೇ ಹೋದರೆ ''ಗ್ಯಾಂಗ್ಸ್ ಆಫ್ ವಸೀಪುರ್'' ಚಿತ್ರದ ಎರಡನೇ ಭಾಗ ಈ ವಾರ ಬಿಡುಗಡೆಯಾಗಿದೆ. ಒಮ್ಮೆ ನೋಡಿ ಬನ್ನಿ. ಸಾಧ್ಯವಾದರೆ ಅವನ ಹಿಂದಿನ ಚಿತ್ರಗಳನ್ನು ನೋಡಿ. ಅನುರಾಗ್ ಪ್ರಭಾವದಿಂದ ಹೊರಬರುವುದು ಬಹಳ ಕಷ್ಟ. ಬಹುಶಃ ನೀವು ಸಿನೆಮಾ ನೋಡುವ ದೃಷ್ಟಿಕೋನವೇ ಬದಲಾದೀತು.  


Saturday, June 23, 2012

ಗಂದಾ ಹೈ, ಮಗರ್ ಧಂದಾ ಹೈ



ಡರ್ಟಿ ಪಿಕ್ಚರ್ ಚಿತ್ರದ ಬಗ್ಗೆ ಬಹಳ ಕೇಳಿದ್ದೆ....ವಿದ್ಯಾ ಬಾಲನ್ ಉತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಾಗಲಂತೂ ಚಿತ್ರ ನೋಡಲೇಬೇಕೆಂದುಕೊಂಡೆ... ನೆನ್ನೆ ರಾತ್ರಿ ಎಲ್ಲ ಕೆಲಸ ಬದಿಗೊತ್ತಿ ನಿದ್ದೆ ಹಾಳು ಮಾಡಿಕೊಂಡು ಚಿತ್ರ ನೋಡಲು ಕುಳಿತೆ... ನೋಡಿದ ಮೇಲೆ ಅನಿಸಿದ್ದಿಷ್ಟೇ....''21 ನೆ ಶತಮಾನದ ಈ ಮುಂಬಾಗಿಲಿನಲ್ಲಿ ಮಾರಾಟ ಮಾಡುವ ಕಲೆಯನ್ನು ಬಲ್ಲವನೇ ರಾಜ...ಗೆದ್ದೊನೇ ಬಾಸು ... ಹೇಗೆ ಗೆದ್ದೇ ಅನ್ನುವುದು ಮುಖ್ಯ ಅಲ್ಲ..''


ಡರ್ಟಿ ಪಿಕ್ಚರ್ ಚಿತ್ರದಲ್ಲಿ ಸಿಲ್ಕ್ ಸ್ಮಿತಾಳ ಜೀವನದ ಸತ್ಯ ಕಥೆ ಇದೆ...ಎಂದು ಬಿಂಬಿಸಿ ಪ್ರಚಾರ ಪಡೆಯಲಾಯಿತು,.. ಆ ಹೆಸರು ಸಮಸ್ಯೆ ತರುತ್ತೆ ಅಂತ ಗೊತ್ತಾದಾಗ... ನಮ್ಮ ಚಿತ್ರದಲ್ಲಿ ಅವಳ ಕಥೆ ಇಲ್ಲ.. ಇದು ಬರೀ ಕಾಲ್ಪನಿಕ ಅಂತ ತಿಪ್ಪೆ ಸಾರಿಸಲಾಯಿತು... ಅನಾವಶ್ಯಕವಾಗಿ... ಸಿಲ್ ಸ್ಮಿತಾ ಹೆಸರು ಹೇಳಿಕೊಂಡು ಪ್ರಚಾರ ಪಡೆದ ಈ ಸಿನೆಮಾದ ಮಾಸ್ಟರ್ ಮೈಂಡ್ ಏಕ್ತಾ ಕಪೂರ್... ತಾನು ಒಬ್ಬ ಯಾವುದೇ ಮುಲಾಜು...ಮೌಲ್ಯ...ನಾಚಿಕೆ ಇಲ್ಲದ ವ್ಯಾಪಾರಸ್ಥಳು ಎಂಬುದನ್ನು ಇನ್ನೊಮ್ಮೆ ಸಾಬೀತು ಮಾಡಿದ್ದಾಳೆ. ಕಾಲ್ಪನಿಕ ಅಂತ ಹೇಳಿಕೊಂಡರೂ ಅನಾವಶ್ಯಕವಾಗಿ ಸಿಲ್ಕ್ ಎನ್ನುವ ಹೆಸರನ್ನು ಚಿತ್ರದಲ್ಲಿ ಪಾತ್ರಕ್ಕೆ ಇಡಲಾಗಿದೆ... ವಾಸ್ತವವಾಗಿ ಆಂಧ್ರ ಪ್ರದೇಶದ ರಜಮಂದ್ರಿ ಬಳಿಯ ಹಳ್ಳಿಯ ಹುಡುಗಿಯಾದ ಸಿಲ್ಕ್ ಸ್ಮಿತಾಳನ್ನು ಒಬ್ಬ ತಮಿಳು ಹುಡುಗಿ ಎಂದು ತೋರಿಸಲಾಗಿದೆ... ಕಥೆಯಲ್ಲಿ ಅವಳ ಜೀವನದ ಏಳು- ಬೀಳು... ಯಾವುದನ್ನೂ ಸರಿಯಾಗಿ ದಾಖಲಿಸಿಲ್ಲ... ಸಿಲ್ಕ್ ತಮಿಳಿಗಿಂತ ತೆಲುಗು ಚಿತ್ರಗಳಲ್ಲಿ ಅತಿ ಹೆಚ್ಚು ಕಾಣಿಸಿಕೊಂಡಳು.... ಅನೇಕ ಉತ್ತಮ ಪಾತ್ರಗಳನ್ನೂ ಕೂಡ ಮಾಡಿದ್ದಳು...ಚಿರಂಜೀವಿಯಂತಹ ನಟ ಸಹ ಸಿಲ್ಕ್ ಅಭಿನಯವನ್ನು ಮೆಚ್ಚಿ ಉತ್ತಮ ಪಾತ್ರ ಕೊಡಿಸಿದ್ದ...ಅವಳು ಹಿಂದಿ ಚಿತ್ರಗಳಲ್ಲಿಯೂ ಕುಣಿದಿದ್ದಾಳೆ...ಒಟ್ಟು ಎಂಟು ಭಾಷೆಗಳಲ್ಲಿ ಮುನ್ನೂರ ಐವತ್ತು ಚಿತ್ರಗಳಲ್ಲಿ ನಟಿಸಿದ್ದಾಳೆ ಕುಣಿದಿದ್ದಾಳೆ... ಇದ್ಯಾವುದರ ಬಗ್ಗೆಯೂ ಚಿತ್ರದಲ್ಲಿಲ್ಲ..ಅವಳನ್ನು ಮತ್ತು ಅವಳ ದುಡ್ಡನ್ನು ಅನೇಕರು ಕಿತ್ತು ತಿಂದರು.. ಅವಳಿಗೆ ಉತ್ತಮ ಸ್ನೇಹಿತೆಯರಂಥ ಸಹಾಯಕಿಯರು ಇದ್ದರು..ಮನೆ ಕೆಲಸದವರು ಇದ್ದರು..ಆದರೆ ಇದ್ಯಾವುದೂ ಚಿತ್ರದಲ್ಲಿಲ್ಲ. ಕೇವಲ ನಾಲ್ಕೈದು ಪಾತ್ರಗಳ ನಡುವೆಯೇ ಕಥೆ ಮುಗಿದು ಹೋಗುತ್ತದೆ.....ನಿಜವಾಗಿಯೂ ಸಿಲ್ಕ್ ಸ್ಮಿತಾಳ ಜೀವನ ಒಬ್ಬ ಉತ್ತಮ ನಿರ್ದೇಶಕನ ಕೈಗೆ ಸಿಕ್ಕಿದ್ದರೆ ಅದ್ಭುತ ಚಿತ್ರವಾಗಬಹುದಾಗಿತ್ತು... ಆದರೆ ಮಿಲನ್ ಲೂಥರಿಯ....ಬರೀ ಗಿಮಿಕ್ ರಾಜ....ಅವರ ಹಿಂದಿನ ಚಿತ್ರ..ಒನ್ಸ್ ಅಪಾನ್ ಅ ಟೈಮ್ ಇನ್ ಮುಂಬೈ ಚಿತ್ರ ಕೂಡ....ವಾಸ್ತವಕ್ಕೆ ದೂರವಾಗಿದ್ದರೂ...ಮುಂಬೈ ಭೂಗತ ದೊರೆಗಳ ಕಥೆ ಎನ್ನುವ ಗಿಮಿಕ್ ಮಾಡಿ...ದುಡ್ಡು ಬಾಚಿದ್ದರು... ಇಲ್ಲಿ ಸಿಲ್ಕ್ ಸ್ಮಿತಾಳ ಕಥೆಯೂ ಪೂರ್ಣವಾಗಿ ಹೇಳಿಲ್ಲ...ಮತ್ತು ಇವರು ಕಾಲ್ಪನಿಕ ಎಂದು ಹೇಳಿಕೊಳ್ಳುವ ಕಥೆಗೂ ತಲೆ ಬುಡ.. ಇಲ್ಲ... ಆದರೆ ವಿದ್ಯಾ ಬಾಲನ್ ನಂತಹ ಮಡಿವಂತ ನಟಿಯ ಬಟ್ಟೆ ಬಿಚ್ಚಿಸಿ ಅದನ್ನೇ ತಮ್ಮ ಪ್ರಚಾರದ ತಿರುಳನ್ನಾಗಿಸಿ... ಸಿಲ್ಕ್ ಹೆಸರು ಉಪಯೋಗಿಸಿ.... ಹೆಸರು ದುಡ್ಡು ಎಲ್ಲ ಬಾಚಿದರು.... ಈ ಚಿತ್ರದಲ್ಲಿ ಒಂದು ಡೈಲಾಗ್ ಇದೆ...''ಸಭ್ಯರ ಮರ್ಯಾದೆ ಬೀದಿ ಪಾಲಾದರೆ ಜಾಸ್ತಿ ಸಂತೋಷ ಪಡುವವರು ಉಳಿದ ಸಭ್ಯರೇ'' ಆ ಮಾತು ಅಕ್ಷರಶಃ ಸತ್ಯ.. ಯಾಕೆಂದರೆ.. ಎಷ್ಟೋ ಜನ ಬಿಚ್ಚಮ್ಮಗಳು ಪ್ರಪಂಚದಲ್ಲಿ ಇದ್ದರೂ..ವಿದ್ಯಾ ಬಾಲನ್ ಬಟ್ಟೆ ಬಿಚ್ಚಿದ್ದಾಳೆ ಎನ್ನುವ ಕಾರಣಕ್ಕೆ ಅದನ್ನು ನೋಡಿದ ನಮ್ಮ ಭಾರತದ ಸಭ್ಯಸ್ಥರು ಅದನ್ನು ಸೂಪರ್ ಹಿಟ್ ಚಿತ್ರವನ್ನಾಗಿಸಿದ್ದಾರೆ..
ಒಟ್ಟಿನಲ್ಲಿ ಮಾರ್ಕೆಟಿಂಗ್ ತಿಳಿದ ಏಕ್ತಾ ಕಪೂರ್... ದುಡ್ಡು ಬಾಚಿದರೆ.. ವಿದ್ಯಾ ಪ್ರಶಸ್ತಿ ಪಡೆದಿದ್ದಾಳೆ... ಅನಗತ್ಯವಾಗಿ ಸಿಲ್ಕ್ ಎಂಬ ಹೆಣ್ಣು ಮಗಳ ಹೆಸರಿಗೆ ಮಸಿ ಬಡಿದಿದ್ದಾರೆ.. ಪ್ರಶ್ನಿಸುವ ಸೌಜನ್ಯ ಸಮಯ... ನಮ್ಮ ಭಾರತದ ಬುದ್ದಿ ಜೀವಿಗಳಿಗೆ ಇಲ್ಲ...
 

ಹುಸಿಯಾದವೋ ಎಲ್ಲ ಹುಸಿಯಾದವೋ


ಆರ್ಥಿಕವಾಗಿ ಹೆಚ್ಚಾದ ಕನ್ನಡ ಚಿತ್ರಗಳ ವ್ಯಾಪ್ತಿ, ಲಾಭದ ಮೊತ್ತ, ಹೊಸ ನಟರ ದಂಡು ಇದೆಲ್ಲ ನೋಡಿದರೆ ನಮ್ಮ ಚಿತ್ರರಂಗ ಬೆಳೆಯುತ್ತಿದೆ ಅನ್ನಿಸೋದು ನಿಜ. ಆದರೆ ನಾವು ಹೆಮ್ಮೆ ಪಡುವಂಥ ಅಥವಾ ನಮ್ಮನ್ನು ಬೆಳೆಸುವಂಥ ಕನ್ನಡ ಸಿನೆಮಾಗಳು ಎಷ್ಟು ಬಂದಿವೆ?
ದೊಡ್ಡ ನಟರಾದ ವಿಷ್ಣು ಕೊನೆಯ ಕೆಲ ವರ್ಷಗಳಲ್ಲಿ ಕಲಾಸಾಮ್ರಾಟ್, ಹುಲಿ, ಸಿಂಹ ಮುಂತಾದ ಪ್ರಾಣಿಗಳ ಸಹವಾಸಕ್ಕೆ ಬಿದ್ದು ನಮ್ಮ ಕನ್ನಡ ಸಿನೆಮಾ, ವಿಷ್ಣು ಸರ್ ಸಿನೆಮಾ ಅಂತ ಹೇಳಿಕೊಂಡು ಖುಷಿ ಪಡುವಂಥದ್ದು ಏನೂ ಮಾಡಲಿಲ್ಲ.  ಅವರು ವೈಯಕ್ತಿಕವಾಗಿ, ಆಧ್ಯಾತ್ಮಿಕವಾಗಿ ಎಷ್ಟು ಪಕ್ವವಾಗುತ್ತಾ ಬಂದರೂ, ಅವರ  ಚಿತ್ರಗಳು ಅಷ್ಟೇ ಕಳಪೆಯಾಗುತ್ತ ಹೋದವು. ಸುದೀಪರ 'ದರ್ಶನ' ಆದಾಗ  ಇವೆಲ್ಲ  ಕೇವಲ ಮಾರುಕಟ್ಟೆಯ  ಅನಿವಾರ್ಯತೆಗಳು ಹುಟ್ಟುಹಾಕಿದ ಹೊಸಮುಖಗಳು ಅಂದುಕೊಳ್ಳುವಾಗಲೇ, ಮೈ ಆಟೋಗ್ರಾಫ್ ನಂಥ ಒಳ್ಳೆ ರಿಮೇಕ್ ಮಾಡಿ, ರಾಮ್ ಗೋಪಾಲ್ ವರ್ಮರಂಥವರ ಸಹವಾಸ ಬೆಳಸಿಕೊಂಡ ಮೇಲೆ, ಅಲ್ಲಿ-ಇಲ್ಲಿ ಕಲಿತದ್ದನ್ನೆಲ್ಲ ಸೇರಿಸಿ ಸುದೀಪ್ ಏನೋ ಮಾಡ್ತಾರೆ ಅಂತ ಕಾದದ್ದೇ ಬಂತು. ಸ್ನೇಹಿತನಿಗಾಗಿ ರಿಮೇಕು, ಸ್ವಮೇಕಿನ ಲಾಸಿಗೆ ಮತ್ತೆ ರಿಮೇಕು, ಕ್ರಿಕೆಟ್ಟು, ಜಗಳ, ಕಿರಿಕ್ಕು ಇದೆಲ್ಲದರ ಮೂಲಕ ತಮ್ಮ ಎನೆರ್ಜಿ ಕಳೆದುಕೊಳ್ಳುತ್ತಿರುವ ಸುದೀಪ್ ಹೊಸ ದೀಪ ಬೆಳಗ್ತಾರೆ ಅಂದುಕೊಳ್ಳೋದು ಮೂರ್ಖತನ. ದರ್ಶನ್ ಇಂಥದ್ದೆನಾದ್ರೂ ಮಾಡ್ತೀನಿ ಅಂತ ಯಾವತ್ತೂ ಸೂಚನೆ ಕೊಟ್ಟಿಲ್ಲ.  ರಿಯಲ್ ಎಸ್ಟೇಟ್ ನಿಂದ ಬಂದ ಅರ್ಥಿಕ ಬದಲಾವಣೆ ಕನ್ನಡ ಚಿತ್ರರಂಗದಲ್ಲಿ ಅನೇಕ ಅಬ್ಬೆಪಾರಿಗಳನ್ನು ನಿರ್ದೇಶಕರನ್ನಾಗಿ ನಟರನ್ನಾಗಿ ಮಾಡಿತು. ಮಳೆ ಜೋರಾಗಿ ಬಂದಾಗ ಉಂಟಾಗುವ ಪ್ರವಾಹದಲ್ಲಿ ಉಪಯೋಗಿಯಾದ  ನೀರಿನ ಜೊತೆ ಕಸ ಕಡ್ಡಿ ಮಣ್ಣು ಮಸಿ ಕೂಡ ಸೇರಿಕೊಂಡಿರುತ್ತೆ.  ಕೆಲದಿನಗಳ ನಂತರ ಎಲ್ಲ ತಿಳಿಯಾಗುತ್ತೆ. ಇಲ್ಲಿಯೂ ಹಾಗೆ ಆಯ್ತು.  ಆದರೆ ಕೆಲವರು ಭರವಸೆ ಮೂಡಿಸಿದ್ದರು. ದೊಡ್ಡ ಸ್ಟಾರ್ ಆಗುತ್ತಾರೆ ಎಂಬ ಕಲ್ಪನೆಯೂ ಇಲ್ಲದ ಗಣೇಶ್ ಏಕಾ ಏಕಿ ಗೋಲ್ಡನ್ ಸ್ಟಾರ್ ಆಗಿ ಭರವಸೆ ಮೂಡಿಸಿದ್ದರು. ವಿಜಿಯಿಂದ ಮಾರ್ಕೆಟ್ ದುನಿಯಾ ದೊಡ್ಡದಾಯ್ತು. ಆದರೆ ಅದರಾಚೆಗೆ ಎಲ್ಲ ಅಯೋಮಯ. ಧಾರಾವಾಹಿಗೆ ಪಡೆದ ಸಂಭಾವನೆಗೆ ನಟಿಸಿ ಚೆಲುವಿನ ಚಿತ್ತಾರ ಬಿಡಿಸಿದ ಗಣೇಶ್ ಎಷ್ಟೇ ಅಸಮಾಧಾನವಿದ್ದರೂ ಒಂದು ಹಿಟ್ ಗಾಗಿ  ಹಳೆ ಗಂಡನ ಪಾದವೇ ಗತಿ ಅಂತ ಕಲಾಸಾಮ್ರಾಟರಿಗೆ ಸಾಮಂತರಾದದ್ದು ಪತ್ನಿಲೀಲಾವಿನೋದ. ಮಹತ್ತರ ನಿರೀಕ್ಷೆ ಮೂಡಿಸಿದ ಭಟ್ರು ಬೇರೆಯವರ ಚಿತ್ರಕ್ಕೆ ಬರೆದ  ಹಾಡುಗಳಲ್ಲಿ ವಿಭಿನ್ನತೆ ಉಳಿಸಿಕೊಂಡರೂ ತಮ್ಮ ಚಿತ್ರಗಳ ಸಂಭಾಷಣೆಯಲ್ಲಿ, ನಾಯಕ ನಟರ ವಿಷಯದಲ್ಲಿ ಉಡಾಫೆಯಲ್ಲಿ ಏಕತಾನತೆಗೆ  ಅಂಟಿಕೊಂಡು ಸೋತ ಚಿತ್ರಗಳನ್ನೂ ಗೆದ್ದಿವೆ ಅಂತ ಬಿಂಬಿಸುವ ಪ್ರಯತ್ನ ಮಾಡಿ ಸಿನೆಮಾ ಬಗ್ಗೆ ಇಷ್ಟು ಪ್ರೌಢವಾಗಿ ಮಾತನಾಡುವ ಭಟ್ಟರು ಕೂಡ ಸೋಲನ್ನು ಒಪ್ಪಿಕೊಳ್ಳದೆ ಕನ್ನಡಿಗರನ್ನು ಮತ್ತಷ್ಟು ಹತಾಶೆಗೆ ತಳ್ಳಿದ್ದಾರೆ.  ಇಂತಿ ನಿನ್ನ ಪ್ರೀತಿಯ ದಲ್ಲಿ ನಡೆದ ಕೆಲವು ತಪ್ಪುಗಳನ್ನು ಸರಿಪಡಿಸುವ ಬದಲಾಗಿ ಸೂರಿ ಕೂಡ ಸ್ಟಾರ್ ಮಾಯೆಯ ಸೇಫ್ ಜೊನ್ ಗೆ ಹೋಗಿದ್ದಾರೆ. ಇದು ನಮ್ಮ ಕನ್ನಡ ಸಿನೆಮಾ. ನಮ್ಮವರು ಮಾಡಿರೋದು ಅಂತ. ಅಂತ ನಾವು ಪರಭಾಷೆಯ ಸ್ನೇಹಿತರಿಗೆ ಹೆಮ್ಮೆಯಿಂದ ತೋರಿಸುವಂಥ ಸಿನೆಮಾಗಳನ್ನು ಯಾರೂ ಮಾಡುತ್ತಿಲ್ಲ. yeak , ಕನ್ನಡ ಸಿನೆಮಾ ನಾ? ಅಂತ ಮೂಗು ಮುರಿಯುವ ಜನರ ಸಂಖ್ಯೆ ಬೆಳೆಯುತ್ತಿದೆ.ಕನ್ನಡಿಗರಲ್ಲೂ ಕೂಡ. ಇತ್ತೀಚಿಗೆ ಆರಕ್ಷಕ ಚಿತ್ರದ ತುಣುಕು ಟಿವಿಯಲ್ಲಿ ಕಾಣಿಸಿತು. ಅದರಲ್ಲಿ ನಾಯಕ ಪೋಲಿಸ್ ಯುನಿಫಾರ್ಮ್ ಜೊತೆಗೆ, ತಲೆ ಮೇಲೆ ಪೊಲಸ್ ಟೋಪಿ, ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡು ನಾಯಕಿಯ ಜೊತೆ ಹುಲ್ಲುಗಾವಲಿನ ಮೇಲೆ ನೃತ್ಯ ಮಾಡ್ತಾನೆ. ಇಂಥ ದೃಶ್ಯಗಳನ್ನು ತೋರಿಸಿದರೆ ಯಾವ ಸ್ನೇಹಿತರು ನಗದೆ ಇರೋಕೆ ಸಾಧ್ಯ...? ನೃತ್ಯ ಮಾಡುವಾಗ ಪೋಲಿಸ್ ಟೋಪಿ ಕನ್ನಡಕ ಎಷ್ಟು funny ಯಾಗಿ ಕಾಣುತ್ತೆ ಅನ್ನೋ ಅರಿವು ಚಿತ್ರೀಕರಣದಲ್ಲಿ ಯಾರಿಗೋ ಬರೋದೆ ಇಲ್ಲವಾ..?  ವಿಷ್ಣು ಅವರ ಕೋನೆ ಚಿತ್ರದಲ್ಲಿ  "ಚಾಮುಂಡಿ ತಾಯಿ ಆಣೆ" ಹಾಡಿನ ನೃತ್ಯ ಸಂಯೋಜನೆ ನೋಡಿ ಯಾವನಿಗಾದರೂ ಬೇಸರವಾಗದೆ ಇರದು. ಏನಾದ್ರೂ ಕೇಳಿದ್ರೆ ನಮ್ಮಲ್ಲಿ ಕತೆ ಇಲ್ಲ ಸಾರ್ ಅಂತಾರೆ. ತಮಿಳಿನ ಸೂರ್ಯನಿಗೆ ಸಿಗುವ ಹೊಸ ರೀತಿಯ ಕಥೆಗಳು ನಮ್ಮಲ್ಲಿ ಯಾರಿಗೂ ಯಾಕೆ ಸಿಗೋದಿಲ್ಲ.? ಅವರು ಮಾಡಿ ಆದ ಮೇಲೆ ಕಾಪಿ ಹೊಡೆಯೋಕೆ ಮಾತ್ರ ನಮಗೆ ಬರುತ್ತೆ.  ಚಿಕ್ಕ ಬಜೆಟ್ ನಲ್ಲಿ ಚೊಕ್ಕವಾಗಿ ಚಿತ್ರ ಮಾಡಿ ದೊಡ್ಡ ಲಾಭವನ್ನು ಕೊಡಿಸುವ ತಾಕತ್ತು ನಮ್ಮ ನಿರ್ದೇಶಕರುಗಳಿಗೆ ಇಲ್ಲದಾಗಿದೆ. ಅಂತಹ  ನಿರ್ದೆಶರನ್ನು ಗುರಿತಿಸಿ ಅವರಿಗೆ ಅವಕಾಶ ಕೊಡುವ ಸಿನೆಮಾ ಜ್ದ್ನಾನ ಇರುವ ನಿರ್ಮಾಪಕರು ತಮ್ಮ ತಮ್ಮ ವಂಶದ ಕುಡಿಗಳನ್ನು ಸ್ಟಾರ್ ಮಾಡುವಲ್ಲಿ ಬ್ಯುಸಿಯಾಗಿದ್ದರೆ.  ಜ್ದ್ನಾನ ಇಲ್ಲದ ನಿರ್ಮಾಪಕರು ರೀಲು ಸುತ್ತಿಸುತ್ತಿದ್ದಾರೆ. ತೆವಲು ತೀರಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕ ಮಾತ್ರ ಭೇರೆ ಭಾಷೆಯ ಒಳ್ಳೊಳ್ಳೆ ಚಿತ್ರಗಳನ್ನು ಇಂಟರ್ನೆಟ್ ನಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಂಡು ಸುಖವಾಗಿದ್ದಾನೆ. ಕನ್ನಡದವರಿಗೆ ಉಗಿಯುತ್ತಲೇ ಇದಾನೆ.